ಬಿಜೆಪಿಗರಿಂದ ಆಧಾರರಹಿತ ಅಪಪ್ರಚಾರ: ಸಚಿವ ರಮಾನಾಥ ರೈ

Update: 2018-05-08 14:10 GMT

ಮಂಗಳೂರು, ಮೇ 8: ನಮಗೆ ಅಭಿವೃದ್ಧಿ ಶ್ರೀರಕ್ಷೆಯಾಗಿದೆ. ಆದರೆ, ಬಿಜೆಪಿಗರಿಗೆ ಅಭಿವೃದ್ಧಿ ಬೇಡ. ಅವರೇನಿದ್ದರೂ ಮತೀಯ ವಿಷಯ ಆಧಾರಿತ ಪ್ರಕರಣಕ್ಕೆ ಹೆಚ್ಚು ಒತ್ತು ನೀಡಿ ಆಧಾರ ರಹಿತ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಪಕ್ಷದ ದ.ಕ. ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮತದಾರರು ಬಿಜೆಪಿಗರ ಈ ಆಮಿಷ, ಅಪಪ್ರಚಾರಕ್ಕೆ ಬಲಿಯಾಗದೆ ಪ್ರಜಾಪ್ರಭುತ್ವವನ್ನು ಬಲಪಡಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಗೊಳ್ಳುತ್ತಿವೆ. ಕಳೆದ ಐದು ವರ್ಷದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಅದನ್ನು ಮತದಾರರು ಕೂಡ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಆದರೆ, ಸೋಲಿನ ಭೀತಿಯಿಂದ ಬಿಜೆಪಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ರಮಾನಾಥ ರೈ ಹೇಳಿದರು.

ಅಪಪ್ರಚಾರವೇ ತಮ್ಮ ಶಕ್ತಿ ಎಂದು ಬಿಜೆಪಿಗರು ಭಾವಿಸಿದಂತಿದೆ. ಆದರೆ, ಸದಾ ಸುಳ್ಳು ಯಾವತ್ತೂ ಫಲಿಸದು. ಕೋಮು ಸೂಕ್ಷ್ಮ ವಿಚಾರವನ್ನು ಕೆದಕಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ದ.ಕ.ಜಿಲ್ಲೆಯಲ್ಲಿ ನಡೆದ ಯಾವುದೇ ಮತೀಯ ಕೊಲೆ ಕೃತ್ಯಗಳಲ್ಲಿ ಕೂಡಾ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿಲ್ಲ. ಬಿಜೆಪಿ- ಸಂಘ ಪರಿವಾರ, ಎಸ್‌ಡಿಪಿಐ-ಪಿಎಫ್‌ಐಯವರೇ ಅದರಲ್ಲಿ ಭಾಗಿಯಾಗಿದ್ದಾರೆ ಎಂದು ರಮಾನಾಥ ರೈ ಆಪಾದಿಸಿದರು.

ಬಂಟ್ವಾಳ ಕ್ಷೇತ್ರದಲ್ಲಿ ನಡೆದ 5 ಕೊಲೆ ಪ್ರಕರಣಗಳಲ್ಲೂ ಮತೀಯ ಶಕ್ತಿಗಳೇ ಭಾಗಿಯಾಗಿದ್ದಾರೆ. ಇವರು ಈ ಕೊಲೆಗಳನ್ನು ಹಿಂದೂ-ಮುಸ್ಲಿಮ್ ವ್ಯಕ್ತಿಗಳ ಕೊಲೆ ಎನ್ನುತ್ತಾರೆಯೇ ವಿನಃ ಮನುಷ್ಯರ ಹತ್ಯೆ ಎನ್ನುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ಹಿಂದೂಗಳ ಹತ್ಯೆ ಎಂದು ಉಲ್ಲೇಖಿಸಿರುವುದು ವಿಪರ್ಯಾಸ ಎಂದು ರಮಾನಾಥ ರೈ ಹೇಳಿದರು.

*ನನಗೆ ಎಲ್ಲರ ಮತಗಳೂ ಬೇಕು: ಎಸ್‌ಡಿಪಿಐ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ರೈ ‘ನಾವು ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಅವರ ಮತಗಳು ಬೇಡ ಎನ್ನುವುದಿಲ್ಲ. ನನಗೆ ಎಲ್ಲರ ಮತಗಳೂ ಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಮಾಜಿ ಕಾರ್ಯದರ್ಶಿ ಸಾನಿ ಮೋಳ್ ಉಸ್ಮಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್, ಮೇಯರ್ ಭಾಸ್ಕರ ಮೊಯ್ಲಿ, ಇಬ್ರಾಹೀಂ ಕೋಡಿಜಾಲ್, ಕಣಚೂರು ಮೋನು, ಬೇಬಿ ಕುಂದರ್, ಸಂತೋಷ್ ಶೆಟ್ಟಿ ಕದ್ರಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News