ಏಕ ನಿವೇಶನ ನಿಯಮದ ಬಗ್ಗೆ ಬಿಜೆಪಿ ಸುಳ್ಳು ಮಾಹಿತಿ: ಮೇಯರ್ ಭಾಸ್ಕರ ಮೊಯ್ಲಿ
ಮಂಗಳೂರು, ಮೇ 8: ಏಕ ನಿವೇಶನ ನಿಯಮಾವಳಿಯ ಕುರಿತು ಬಿಜೆಪಿ ಜನತೆಗೆ ಸುಳ್ಳು ಮಾಹಿತಿ ನೀಡುತ್ತಿದೆ. 2011ರಲ್ಲಿ ಏಕ ನಿವೇಶನ ಕುರಿತ ಕಾನೂನು ಜಾರಿಗೆ ತಂದಿದ್ದೇ ಬಿಜೆಪಿಗರು. ಅದನ್ನು ಮರೆತು ಇದೀಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಮೇಯರ್ ಭಾಸ್ಕರ ಮೊಯ್ಲಿ ಆಪಾದಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿವೆ. ಆದರೆ ಬಿಜೆಪಿ ಆಧಾರರಹಿತ ಹೇಳಿಕೆ ನೀಡುವಲ್ಲಿ ನಿರತವಾಗಿದೆ ಎಂದು ಹೇಳಿದರು.
ಶಾಸಕ ಜೆ.ಆರ್.ಲೋಬೊ ಗ್ರಾಮೀಣ ಪ್ರದೇಶಕ್ಕೆ ಒತ್ತು ನೀಡಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬಡವರಿಗೆ ಹಕ್ಕುಪತ್ರ ವಿತರಣೆ, ಮನೆ ನಿರ್ಮಾಣ, ನಗರದ ಮಾರ್ಕೆಟ್‌ಗಳ ಅಭಿವೃದ್ಧಿ ಸಹಿತ ಜನರಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಮೊಯ್ದಿನ್ ಬಾವಾ ತನ್ನ ಕ್ಷೇತ್ರದಲ್ಲಿ ಸರಕಾರದ ಹಲವು ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಆದರೆ ಬಿಜೆಪಿಯ ಯೋಗೀಶ್ ಭಟ್ ನಾಲ್ಕು ಅವಧಿಯಲ್ಲಿ ಶಾಸಕರಾಗಿ ಮಾಡಿದ ಸಾಧನೆ ಏನು ಎಂಬುದನ್ನು ಜನತೆಗೆ ತಿಳಿಸಲಿ ಎಂದು ಭಾಸ್ಕರ ಮೊಯ್ಲಿ ಸವಾಲೆಸೆದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರೋತ್ಥಾನ ಎರಡನೇ ಹಂತದ ವಿಶೇಷ ಅನುದಾನದಡಿ 141 ಕಾಮಗಾರಿಗಳು ಮಂಜೂರಾಗಿದ್ದು, 117 ಕಾಮಗಾರಿಗಳು ಈಗಾಗಲೇ ಮುಗಿದಿವೆ. 17 ಕಾಮಗಾರಿಗಳು ಪ್ರಗತಿಯಲ್ಲಿವೆ. 7 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಅನುಷ್ಠಾನಕ್ಕೆ ಬಾಕಿಯಿದೆ. ಒಟ್ಟು ನಿಗದಿಯಾದ 10,000 ಲಕ್ಷ ರೂ. ಅನುದಾನದಲ್ಲಿ 9,600 ಲಕ್ಷ ರೂ. ಈಗಾಗಲೇ ಬಿಡುಗಡೆಯಾಗಿದೆ. ವಿವಿಧ ಕಾಮಗಾರಿಗಳಿಗೆ 6437.99 ಲಕ್ಷ ಖರ್ಚು ಮಾಡಲಾಗಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ಮೇಯರ್‌ಗಳಾದ ಹರಿನಾಥ್, ಮಹಾಬಲ ಮಾರ್ಲ, ಪಾಲಿಕೆಯ ಸಚೇತಕ ಶಶಿಧರ ಹೆಗ್ಡೆ, ಕಾಂಗ್ರೆಸ್ ಪ್ರಮುಖರಾದ ಸಂತೋಷ್ ಶೆಟ್ಟಿ, ದೀಪಕ್ ಪೂಜಾರಿ ಉಪಸ್ಥಿತರಿದ್ದರು.