×
Ad

ಮತಯಾಚಿಸುವ ಮುನ್ನ ಉತ್ತರಿಸಿ: ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿಗೆ ಎಸಿ ವಿನಯ್ ರಾಜ್ ಸವಾಲು

Update: 2018-05-08 18:01 IST

ಮಂಗಳೂರು, ಮೇ 8: ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ (ಡಿಸಿಐ) ಸದಸ್ಯರ ವಿರುದ್ಧ 50 ಕೋಟಿ ರೂ. ಲಂಚ ಹಗರಣದ ಆರೋಪವಿದ್ದು, ಇದರಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಅವರ ಹೆಸರು ಕೂಡ ಕೇಳಿ ಬರುತ್ತಿದ್ದು, ಜನರಲ್ಲಿ ಮತಯಾಚಿಸುವ ಮುನ್ನ ಇದಕ್ಕವರು ಉತ್ತರಿಸಬೇಕೆಂದು ಕಾಂಗ್ರೆಸ್ ಮುಖಂಡ ಎ.ಸಿ.ವಿನಯ್ ರಾಜ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಡಿಸಿಐ ನಿವೃತ್ತ ಸದಸ್ಯ ಡಾ. ಶಾಜಿ ಜೋಸೆಫ್‌ರವರು ಕೇರಳ ರಾಜ್ಯ ಹೈಕೋರ್ಟ್‌ನಲ್ಲಿ ಸುಮಾರು 7 ಮಂದಿ ಡಿಸಿಐ ಸದಸ್ಯರ ವಿರುದ್ಧ ಲಂಚ ಹಗರಣಕ್ಕೆ ಸಂಬಂಧಿಸಿ ಸಾರ್ವಜನಿಕ ಹಿತಾಸಕ್ತಿಗೆ ಅರ್ಜಿ ಹಾಕಿದ್ದು, ಈ ಹಗರಣದಲ್ಲಿ ಡಾ. ವೈ. ಭರತ್ ಶೆಟ್ಟಿ ಕೂಡಾ ಒಬ್ಬರು ಎಂಬ ಬಗ್ಗೆ ದೂರು ಸಲ್ಲಿಸಿದ್ದಾರೆ. 2012-13ನೆ ಸಾಲಿಗೆ ಸಂಬಂಧಪಟ್ಟಂತೆ ಸುಮಾರು 1187 ಹೊಸ ಪೋಸ್ಟ್ ಗ್ರಾಜುವೇಶನ್ ಸೀಟುಗಳನ್ನು ಸುಮಾರು 50 ಕೋಟಿ ರೂ. ಲಂಚ ಪಡೆದು ಅನುಮತಿ ನೀಡಿದ ಪ್ರಕರಣ ಇದಾಗಿರುತ್ತದೆ. ಈ ಹಗರಣಕ್ಕೆ ಸಂಬಂಧಪಟ್ಟಂತೆ ಭರತ್ ಶೆಟ್ಟಿಯವರ ಮನೆಗೆ ಸಿಬಿಐ ದಾಳಿ ಕೂಡಾ ನಡೆದಿದೆ ಎಂದು ಅವರು ಹೇಳಿದರು.

ಈ ಮೂಲಕ ಡಾ. ಭರತ್ ಶೆಟ್ಟಿಯವರು ದಾಖಲೆಗಳನ್ನು ತಿರುಚಿ ಫೋರ್ಜರಿ ಮಾಡಿದ್ದು ಮಾತ್ರವಲ್ಲದೆ ಅವರ ಮೇಲೆ ಭ್ರಷ್ಟಾಚಾರಿ ಎಂಬ ಆರೋಪವೂ ಇದೆ. ಹಗರಣದ ವಿಚಾರ ಪತ್ರಿಕಾ ಮಾಧ್ಯಮಗಳಲ್ಲಿ ಬಂದಿದೆ. ಮಾತ್ರವಲ್ಲದೆ ಅಧಿಕಾರ ದಾಹ ಮತ್ತು ಅದಕ್ಕೋಸ್ಕರ ಕಾನೂನು ಬಾಹಿರವಾಗಿ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಾವಳಿಗಳನ್ನು ಉಲ್ಲಂಘಿಸಿ ಅವರು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯತ್ವವನ್ನು ಪಡೆದಿರುವುದು ಕೇಂದ್ರ ಸರಕಾರದ ಮತ್ತು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ವಿರುದ್ಧ ಮಾಡಿದ ವಂಚನೆ. ಭರತ್ ಶೆಟ್ಟಿಯವರ ಪ್ರಥಮ ಹಂತದ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯತ್ವ ಅವಧಿ ಮುಗಿದ ಬಳಿಕ ಭಾರತೀಯ ದಂತ ವೈದ್ಯಕೀಯ ಪರಿಷತ್ತಿನ ಸದಸ್ಯತ್ವವನ್ನು ವಾಮಮಾರ್ಗದಿಂದ ಪಡೆದಿದ್ದಾರೆ ಎಂದು ಅವರು ಆರೋಪಿಸಿದರು.

ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಾವಳಿಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ಕಾಲೇಜಿನಲ್ಲಿ ಪೂರ್ಣಕಾಲಿಕ ಬೋಧನೆ ಮಾಡುವುದಿದ್ದಲ್ಲಿ ಇನ್ನೊಂದು ಕಾಲೇಜಿನಲ್ಲಿ ಬೋಧಕ ಸಿಬ್ಬಂದಿಯಾಗಿ ಕೆಲಸ ಮಾಡಲು ಅವಕಾಶವಿರುವುದಿಲ್ಲ. ಭರತ್ ಶೆಟ್ಟಿಯವರು 2015ರಲ್ಲಿ ಕರ್ನಾಟಕ ರಾಜ್ಯದ ರಾಜೀವ್ ಗಾಂಧಿ ಹೆಲ್ತ್ ಯೂನಿವರ್ಸಿಟಿ ವ್ಯಾಪ್ತಿಯಲ್ಲಿ ಬರುವ ಮಂಗಳೂರು ನಗರದ ಎಜೆ ಡೆಂಟಲ್ ಕಾಲೇಜಿನ ಪ್ರೊಫೆಸರ್ ಮತ್ತು ಪ್ರಾಂಶುಪಾಲರಾಗಿದ್ದಾರೆ. ಇದೇ ಸಂದರ್ಭದಲ್ಲಿ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಎಜೆ ದಂತ ಕಾಲೇಜಿಗೆ ಪರಿವೀಕ್ಷಕರಾಗಿ ಬರುತ್ತಿದ್ದ ರಾಜಸ್ತಾನದ ಉದಯಪುರ್‌ನಲ್ಲಿರುವ ಫೆಸಿಪಿಕ್ ಅಕಾಡೆಮಿಕ್ ಆಫ್ ಹಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ ಯುನಿವರ್ಸಿಟಿಯ ಪ್ರಾಂಶುಪಾಲರಾದ ಡಾ. ಭಗವಾನ್ ದಾಸ್‌ರವರನ್ನು ಹಿಡಿದು ಕಾನೂನು ಬಾಹಿರವಾಗಿ ಮೇಲೆ ಹೆಸರಿಸಿದ ಉದಯಪುರ ಕಾಲೇಜಿನ ಪ್ರೊಫೆಸರ್ ಆಗಿ ಭರತ್ ಶೆಟ್ಟಿಯವರ ಹೆಸರನ್ನು ಆ ಕಾಲೇಜಿನ ಪ್ರಾಧ್ಯಾಪಕರಾಗಿ ಕಾನೂನು ಬಾಹಿರವಾಗಿ ಕಡತದಲ್ಲಿ ಸೇರಿಸಿ, ಆ ಯುನಿವರ್ಸಿಟಿಯಿಂದ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿ ಆಯ್ಕೆ ಮಾಡಿಸುವುದರಲ್ಲಿ ಸಫಲಾಗಿದ್ದಾರೆ ಮತ್ತು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಉಪಾಧ್ಯಕ್ಷರಾದರು. ಫೆಸಿಫಿಕ್ ಅಕಾಡೆಮಿಕ್ ಆಫ್ ಹಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ ಯುನಿವರ್ಸಿಟಿಯ ಪ್ರಾಂಶುಪಾಲರು ಮತ್ತು ಭರತ್ ಶೆಟ್ಟಿಯವರು ಸೇರಿಕೊಂಡು ಭಾರತದಾದ್ಯಂತ ಅನೇಕ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಡೆಂಟಲ್ ಕೌನ್ಸಿಲ್ ಇಂಡಿಯಾದ ನಿಯಮಗಳಂತೆ ಮೂಲಸೌಕರ್ಯಗಳಿಲ್ಲದಿದ್ದರೂ ಸಹ ಕೋಟಿಗಟ್ಟಲೆ ಲಂಚ ಪಡೆದು ಅದಕ್ಕೆ ಅನುಮತಿಯನ್ನು ನೀಡಿರುವ ಬಗ್ಗೆಯೂ ಅವರ ಮೇಲೆ ಆರೋಪವಿದೆ. ಇಂತಹ ವ್ಯಕ್ತಿಯನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದಲ್ಲಿ ಅವರು ಯಾವ ರೀತಿಯ ನ್ಯಾಯವನ್ನು ಕ್ಷೇತ್ರದ ಜನತೆಗೆ ನೀಡಿಯಾರು ಎಂದು ವಿನಯ್‌ರಾಜ್ ಪ್ರಶ್ನಿಸಿದರು.

ಅವರ ಮೇಲೆ ವಿವಿಧ ರೀತಿಯ ಆರೋಪಗಳು ಪತ್ರಿಕಾ ಮತ್ತು ದೃಶ್ಯ ಮಾದ್ಯಗಳಲ್ಲಿ ಬಂದಿದ್ದು, ಈ ಒಂದು ಕಾರಣದಿಂದ ಎಲ್ಲಿ ತನ್ನ ಕರಾಳ ಮುಖ ಬಹಿರಂಗವಾಗುತ್ತದೆ ಎಂಬ ಆತಂಕದಿಂದ ಸುಮಾರು 30 ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ವಿರುದ್ಧ ಎಕ್ಸ್‌ಪಾರ್ಟಿ ಇಂಜೆಕ್ಷನ್ ಪಡೆದಿರುತ್ತಾರೆ. ಅವರು ಸಚ್ಚಾರಿತ್ಯ ವ್ಯಕ್ತಿಯಾಗಿದ್ದಲ್ಲಿ ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾ ಮಾಧ್ಯಮಗಳ ವಿರುದ್ಧ ಮೊಕದ್ದಮೆ ಹೂಡುವ ಅಗತ್ಯವಿತ್ತೇ? ಈ ಬಗ್ಗೆ ಅವರು ಉತ್ತರಿಸಬೇಕು ಎಂದು ವಿನಯ್‌ರಾಜ್ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಮೊಯ್ದಿನ್ ಬಾವ ಕಳೆದ ಐದು ವರ್ಷಗಳಲ್ಲಿ ಸಾವಿರಾರು ಕೋಟಿ ರೂ. ಅನುದಾನವನ್ನು ತರುವ ಮೂಲಕ ಕ್ಷೇತ್ರಾದ್ಯಂತ ಜನರ ಬೇಡಿಕೆಗಳಿಗೆ ಸ್ಪಂದನೆ ನೀಡುತ್ತಾ ಕ್ಷೇತ್ರದ ಸಮಸ್ತ ರಸ್ತೆಗಳ ಅಭಿವೃದ್ಧಿ, ನೀರು ಪೂರೈಕೆ, ದಾರಿ ದೀಪದ ವ್ಯವಸ್ಥೆ, ಮಾರ್ಕೆಟ್‌ಗಳ ಅಭಿವೃದ್ಧಿ ಮತ್ತು ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ ಮತ್ತು ವಸತಿ ರಹಿತರಿಗೆ ನಿವೇಶನ ನೀಡಿಕೆ ಮೊದಲಾದ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸುರೇಂದ್ರ ಕಾಂಬ್ಳಿ, ಜಯಶೀಲ ಅಡ್ಯಂತಾಯ, ಡಾ. ಶೇಖರ್ ಪೂಜಾರಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News