×
Ad

ಕಾವೇರಿ ವಿವಾದ: ನೀಡಿದ ತೀರ್ಪನ್ನು ಮೊದಲು ಪಾಲಿಸಿ; ಕೇಂದ್ರಕ್ಕೆ ಸುಪ್ರೀಂ ಆದೇಶ

Update: 2018-05-08 19:19 IST

ಹೊಸದಿಲ್ಲಿ, ಮೇ.8: ಕಾವೇರಿ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಮೊದಲು ಪಾಲಿಸಿ ಎಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠವು ಮಂಗಳವಾರ ಕೇಂದ್ರ ಸರಕಾರಕ್ಕೆ ಆದೇಶಿಸಿದೆ. ನಾವು ಪದೇಪದೇ ಹೇಳಬೇಕಾಗಿಲ್ಲ. ಒಂದು ಆದೇಶವನ್ನು ನೀಡಿದಾಗ ಅದನ್ನು ಮೊದಲು ಅನುಷ್ಠಾನಕ್ಕೆ ತರಬೇಕು ಎಂದು ನ್ಯಾಯಾಧೀಶ ಎ.ಎಂ ಖಾನ್ವಿಲ್ಕರ್ ಹಾಗೂ ಡಿ.ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ತಿಳಿಸಿದೆ. ಕರಡು ಸಲ್ಲಿಕೆಗೆ ಆರು ದಿನಗಳ ಸಮಯಾವಕಾಶ ನೀಡಿರುವ ನ್ಯಾಯಾಲಯ ಮೇ 14ರಂದು ಕರಡು ಯೋಜನೆಯೊಂದಿಗೆ ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿಗೆ ಸೂಚಿಸಿದೆ. ಮೇ 3ರ ಒಳಗಾಗಿ ಕಾವೇರಿ ಕರಡು ಯೋಜನೆಯನ್ನು ರಚಿಸುವಂತೆ ಸರ್ವೋಚ್ಚ ನ್ಯಾಯಾಲಯ ಎಪ್ರಿಲ್ 9ರಂದು ಕೇಂದ್ರಕ್ಕೆ ಸೂಚಿಸಿತ್ತು. ಆಮೂಲಕ 200 ವರ್ಷಗಳಿಂದ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ನಡೆಯುತ್ತಿರುವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಆದೇಶಿಸಿತ್ತು.

ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿ ಮಧ್ಯೆ ಕಾವೇರಿ ನೀರನ್ನು ಹಂಚಲು ಯೋಜನೆಯನ್ನು ಅಂತಿಮಗೊಳಿಸಲಾಗುತ್ತಿದೆ ಮತ್ತು ಅದನ್ನು ಹತ್ತು ದಿನಗಳ ಒಳಗೆ ಕೇಂದ್ರ ಸಂಪುಟದ ಅಂಗೀಕಾರದ ನಂತರ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಸೋಮವಾರ ಕೇಂದ್ರ ತಿಳಿಸಿತ್ತು. ಕರ್ನಾಟಕದಲ್ಲಿ ಚುನಾವಣೆ ನಡೆಯಲಿರುವುದರಿಂದ ಈ ಸಮಯದಲ್ಲಿ ಯೋಜನೆಯನ್ನು ಜಾರಿ ಮಾಡಿದರೆ ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುವ ಸಂಭವವಿದೆ. ಇದರಿಂದ ಕಾನೂನು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಮತ್ತು ಚುನಾವಣಾ ಪ್ರಕ್ರಿಯೆ ಕೂಡಾ ಭಾದಿಸಲ್ಪಡಬಹುದು ಎಂದು ಕೇಂದ್ರ ತನ್ನ ಮನವಿಯಲ್ಲಿ ತಿಳಿಸಿತ್ತು.

ಕಾವೇರಿ ಕರಡು ಯೋಜನೆಯನ್ನು ರೂಪಿಸದಿರುವುದಕ್ಕೆ ಕೇಂದ್ರಕ್ಕೆ ಸುಪ್ರೀಂ ತರಾಟೆ

ಕಾವೇರಿ ಕರಡು ಯೋಜನೆಯನ್ನು ರೂಪಿಸದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಮಂಗಳವಾರದಂದು ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಆದರೆ ಈ ಕುರಿತ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿತು.

ಕರಡು ಯೋಜನೆಗೆ ಅಂತಿಮ ಸ್ಪರ್ಶವನ್ನು ನೀಡಲು ಮತ್ತು ಕೇಂದ್ರ ಸಂಪುಟದ ಅನುಮೋದನೆಯನ್ನು ಪಡೆಯಲು ಹತ್ತು ದಿನಗಳ ಸಮಯಾವಕಾಶವನ್ನು ನೀಡಬೇಕೆಂದು ಅಟರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಹುತೇಕ ಎಲ್ಲ ಸಚಿವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ ಎಂದು ಹಿಂದಿನ ವಿಚಾರಣೆ ವೇಳೆ ಅಟರ್ನಿ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News