×
Ad

ಕಾಂಗ್ರೆಸ್‌ಗೆ ಮತ್ತೆ ಜನಾಶೀರ್ವಾದ ಸಿಗಲಿದೆ: ಯು.ಟಿ.ಖಾದರ್

Update: 2018-05-08 20:03 IST

ಕೊಣಾಜೆ, ಮೇ 8: ಬಿಜೆಪಿಯವರು ಅನ್ನಭಾಗ್ಯವನ್ನು ಕನ್ನಭಾಗ್ಯ ಎಂದೆಲ್ಲಾ ಟೀಕಿಸುತ್ತಿದ್ದಾರೆ. ಆದರೆ ರಾಜ್ಯದ ಬಡಜನರ ಹಸಿವು ನೀಗಿಸಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಗೆ ಸಲ್ಲುತ್ತದೆ. ಕಳೆದ ಐದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವು ರಾಜ್ಯದ ಅಭಿವೃದ್ಧಿಯೊಂದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಪರಿಣಾಮ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರವನ್ನು ವಹಿಸಿಕೊಳ್ಳಲಿದೆ ಎಂದು ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಅವರು ಹೇಳಿದರು.

ಅವರು ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು, ಹಕ್ಕುಪತ್ರ, ಪಡಿತರ ಚೀಟಿ ಸೇರಿದಂತೆ ಜನರ ಮೂಲಭೂತ ಸೌಲಭ್ಯಗಳ ವಿಸ್ತರಣೆಗೆ ಪ್ರಾಮಾಣಿಕವಾದ ಪ್ರಯತ್ನ ಮಾಡಿದ್ದೇನೆ. ಯಾರೋ ಎಷ್ಟೇ ನನ್ನ ಬಗ್ಗೆ ಅಪಪ್ರಚಾರ ನಡೆಸಿಕೊಂಡು ಬಂದರೂ ಕ್ಷೇತ್ರದ ಮತದಾರರು ಜಾತಿ ಮತ ಬೇಧವಿಲ್ಲದೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಹಾರಾಷ್ಟ್ರದ ಮಾಜಿ ಸಚಿವ ಸುರೇಶ್ ಶೆಟ್ಟಿ ಅವರು, ದೇಶದಲ್ಲಿ ಸುಳ್ಳುಗಳನ್ನೇ ಬಂಡವಾಳವನ್ನಾಗಿಸಿ ಮೋದಿ ನೇತೃತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಕರ್ನಾಟಕದ ಜನತೆ ಈ ರೀತಿಯ ಮೋಸದಾಟಕ್ಕೆ ಬಲಿಯಾಗದೆ ಇಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಆಡಳಿತ ನಡೆಸುವುದು ಶತಸಿದ್ಧ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಉಸ್ತುವಾರಿ ರಾಜಶೇಖರ ಕೋಟ್ಯಾನ್, ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಕೆ.ಎಸ್.ಎಂ.ಮಸೂದ್, ಕಣಚೂರು ಮೋನು, ಸದಾಶಿವ ಉಳ್ಳಾಲ, ಅರುಣ್ ಬಂಗೇರ, ಟಿ.ಎಸ್.ಅಬ್ದುಲ್ಲಾ ಸಾಮಣಿಗೆ, ಸಂತೋಷ್ ಶೆಟ್ಟಿ, ಪ್ರಶಾಂತ್ ಕಾಜವ, ಮುಸ್ತಫಾ ಹರೇಕಳ, ರಮೇಶ್ ಶೆಟ್ಟಿ, ಮಹಮ್ಮದ್ ಮೋನು, ಎನ್.ಎಸ್.ಕರೀಂ, ಪದ್ಮನಾಭ ಗಟ್ಟಿ, ನಾಸೀರ್ ಸಾಮಣಿಗೆ, ಇಕ್ಬಾಲ್ ಸಾಮಣಿಗೆ, ಸಲೀಂ ಮೇಘ, ಶೌಕತ್ ಆಲಿ ಮೊದಲಾದವರು ಉಪಸ್ಥಿತರಿದ್ದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್ ಸ್ವಾಗತಿಸಿದರು. ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News