×
Ad

ಲೈಂಗಿಕ ಶೋಷಣೆಯು ಮಕ್ಕಳಲ್ಲಿ ಶಾಶ್ವತ ಮಾನಸಿಕ ಆಘಾತಕ್ಕೆ ಕಾರಣವಾಗುತ್ತದೆ : ಅಧ್ಯಯನ

Update: 2018-05-08 20:14 IST

ಹೊಸದಿಲ್ಲಿ,ಮೆ 8: ಲೈಂಗಿಕ ಶೋಷಣೆಗೊಳಗಾಗುವ ಮಕ್ಕಳು ಹಲವಾರು ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾರೆ ಮತ್ತು ಅದು ಅವರ ಬದುಕಿನ ಮೇಲೆ ವಿನಾಶಕ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಸರಿಪಡಿಸಲಾಗದ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಷ್ ಸತ್ಯಾರ್ಥಿ ಮಕ್ಕಳ ಪ್ರತಿಷ್ಠಾನವು ನಡೆಸಿದ ಅಧ್ಯಯನವು ಬೆಟ್ಟು ಮಾಡಿದೆ.

ಪ್ರತಿಷ್ಠಾನವು ಸಂಪರ್ಕಿಸಿದ್ದ 8ರಿಂದ 16 ವರ್ಷ ವಯೋಮಾದ 96 ಸಂತ್ರಸ್ತರು ಮತ್ತು ಅವರ ಕುಟುಂಬಗಳ ಪೈಕಿ ಕೇವಲ 14 ಕುಟುಂಬಗಳು ಮಕ್ಕಳ ಲೈಂಗಿಕ ಶೋಷಣೆಯ ಮಾನಸಿಕ ಪರಿಣಾಮಗಳ ಕುರಿತ ಅಧ್ಯಯನದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದವು. ಅಂತಿಮ ಸಂವಾದ ಮತ್ತು ಸಂದರ್ಶನಕ್ಕಾಗಿ ಪ್ರತಿಷ್ಠಾನವು ಈ ಕುಟುಂಬಗಳನ್ನು ಸಂಪರ್ಕಿಸಿದ್ದಾಗ ಅಗತ್ಯ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಲು ಎರಡು ಕುಟುಂಬಗಳು ನಿರಾಕರಿಸಿದ್ದವು.

 ಲೈಂಗಿಕ ಶೋಷಣೆಯು ಮಕ್ಕಳನ್ನು ಕಾಯಂ ಯಾತನೆ ಮತ್ತು ಆಘಾತಕ್ಕೆ ತಳ್ಳುತ್ತದೆ . ಇದು ಮಕ್ಕಳ ಮೇಲೆ ದೈಹಿಕ,ಮಾನಸಿಕ ಪರಿಣಾಮಗಳನ್ನು ಬೀರುತ್ತದೆ. ಸಾಮಾಜಿಕವಾಗಿ ಮಕ್ಕಳಲ್ಲಿ ಕೀಳರಿಮೆ ಮೂಡಿಸುವ ಜೊತೆಗೆ ಅವರ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬಾಧಕವಾಗುತ್ತದೆ ಎಂದು ಹೇಳಿರುವ ಅಧ್ಯಯನವು,ಇಂತಹ ಕೃತ್ಯಗಳು ಮಕ್ಕಳ ಪಾಲಿಗೆ ವಿನಾಶಕವಾಗಿದ್ದು,ಅವರ ಮೇಲೆ ಸರಿಪಡಿಸಲಾಗದ ಪರಿಣಾಮಗಳನ್ನು ಬೀರುತ್ತವೆ. ಇಂತಹ ಅಪರಾಧಗಳನ್ನು ತಡೆಯಲು ಮತ್ತು ಸಂತ್ರಸ್ತರಿಗೆ ಪರಿಣಾಮಕಾರಿ ಬೆಂಬಲವನ್ನು ನೀಡಲು ಸಾಮಾಜಿಕ,ಸರಕಾರಿ ಮತ್ತು ನ್ಯಾಯಾಂಗ ಮಟ್ಟಗಳಲ್ಲಿ ಸ್ಪಂದನವನ್ನು ಉತ್ತಮಗೊಳಿಸುವ ಮತ್ತು ಬಲಗೊಳಿಸುವ ತುರ್ತು ಅಗತ್ಯವಿದೆ ಎನ್ನುವುದನ್ನು ಭಾರತದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಮಕ್ಕಳ ಮೇಲೆ ಅತ್ಯಾಚಾರ ಪ್ರವೃತ್ತಿಯು ಬೆಟ್ಟು ಮಾಡಿದೆ ಎಂದು ಅಧ್ಯಯನ ವರದಿಯು ತಿಳಿಸಿದೆ.

ಲೈಂಗಿಕ ಶೋಷಣೆಗೊಳಗಾದ ಮಕ್ಕಳು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ, ತಮ್ಮನ್ನು ಪ್ರತೇಕಿಸಲಾಗುತ್ತಿದೆ ಎಂಬ ಭಾವನೆ ಅವರನ್ನು ಕಾಡುತ್ತದೆ. ಒಬ್ಬರೇ ಹೊರಗೆ ಹೋಗಲು ಹೆದರುತ್ತಾರೆ ಮತ್ತು ತಮ್ಮ ಕುಟುಂಬ ಸದಸ್ಯರ ವರ್ತನೆಯಲ್ಲಿ ಬದಲಾವಣೆಯನ್ನು ಅನುಭವಿಸುತ್ತಾರೆ. 15 ವರ್ಷ ಮತ್ತು ಅದಕ್ಕಿಂತ ಮೇಲಿನ ವಯೋಮಾನದ ಮಕ್ಕಳು ಸ್ವಯಂ ದೂರಿಕೊಳ್ಳುವ ಮತ್ತು ಸ್ವಯಂಹಾನಿಗೊಳಗಾಗುವ ಅಪಾಯವಿದೆ ಎಂದೂ ಅದು ಹೇಳಿದೆ.

ಲೈಂಗಿಕ ಶೋಷಣೆಗೊಳಗಾದ ಮಕ್ಕಳಿಗೆ ಕುಟುಂಬದ ಬೆಂಬಲ ದೊರೆತ ಪ್ರಕರಣಗಳಲ್ಲಿ ಅವರಲ್ಲಿ ಮತ್ತೆ ಆತ್ಮವಿಶ್ವಾಸ ಮರಳಿರುವುದೂ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.

ಕಾನೂನು ಮತ್ತು ಇತರ ಬೆಂಬಲ ವ್ಯವಸ್ಥೆಗಳ ಕುರಿತು ಸಂತ್ರಸ್ತರು ಮತ್ತು ಅವರ ಕುಟುಂಬಗಳ ಅನುಭವಗಳನ್ನೂ ದಾಖಲಿಸಿರುವ ಅಧ್ಯಯನ ವರದಿಯು, ಪ್ರಕರಣಗಳು ಬಾಕಿ ಉಳಿಯುವುದು ಮತ್ತು ವಿಚಾರಣೆಯಲ್ಲಿ ವಿಳಂಬ ಇವು ಸಂತ್ರಸ್ತರನ್ನು ಮುಖ್ಯವಾಹಿನಿಗೆ ಮರಳಿ ತರುವಲ್ಲಿ ಮುಖ್ಯ ತೊಡಕುಗಳಲ್ಲಿ ಸೇರಿವೆ ಎಂದೂ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News