ಚಲಿಸುವ ಕಾರಿನಿಂದ ಮಗುವನ್ನು ಹೊರಗೆಸೆದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

Update: 2018-05-08 14:52 GMT

ಲಕ್ನೊ, ಮೇ 8: ಚಲಿಸುವ ಕಾರಿನಿಂದ ಮೂರು ವರ್ಷದ ಮಗುವನ್ನು ಹೊರಗೆಸೆದ ಬಳಿಕ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ದಿಲ್ಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. 

ಕಾರಿನಿಂದ ಹೊರಗೆಸೆಯಲ್ಪಟ್ಟ ಮಗುವನ್ನು ಗ್ರಾಮಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಮಗು ಅಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅತ್ಯಾಚಾರ ನಡೆಸಿದ ಬಳಿಕ ಮಹಿಳೆಯನ್ನು ಚಪಾರ್ ಪ್ರದೇಶದಲ್ಲಿ ಕಾರಿನಿಂದ ಇಳಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ . ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ನಗರ ಪೊಲೀಸ್ ಅಧೀಕ್ಷಕ ಓಂಬೀರ್ ಸಿಂಗ್ ತಿಳಿಸಿದ್ದಾರೆ.

ಆರೋಪಿಗಳಲ್ಲಿ ಓರ್ವನಾದ ಆರ್.ಕೆ.ಮೆಹ್ತ ಎಂಬಾತ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ ತನ್ನನ್ನು ಕರೆಸಿಕೊಂಡಿದ್ದ. ಅಲ್ಲಿ ಉದ್ಯೋಗದ ಸಂದರ್ಶನ ನಡೆಸುವ ನೆಪದಲ್ಲಿ ಮೆಹ್ತ ಮತ್ತಾತನ ಸ್ನೇಹಿತರು ಕುಡಿಯಲು ಕೊಟ್ಟ ಜ್ಯೂಸ್‌ನಲ್ಲಿ ಮತ್ತು ಬರಿಸುವ ಔಷಧ ಬೆರೆಸಿದ್ದು ಅದನ್ನು ಕುಡಿದ ಬಳಿಕ ತನಗೆ ಸ್ಮೃತಿ ತಪ್ಪಿದೆ. ಈ ಸಂದರ್ಭ ಆರೋಪಿಗಳು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು 26ರ ಹರೆಯದ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಈ ವರ್ಷದ ಆರಂಭದ ಮೂರೂವರೆ ತಿಂಗಳಾವಧಿಯಲ್ಲೇ ದಿಲ್ಲಿಯಲ್ಲಿ ಪ್ರತೀ ದಿನ ಐದಕ್ಕೂ ಹೆಚ್ಚು ಮಹಿಳೆಯರು ಅತ್ಯಾಚಾರಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಇಂತಹ ಘಟನೆಗಳಲ್ಲಿ ಶೇ.96ರಷ್ಟು ಸಂದರ್ಭಗಳಲ್ಲಿ ಸಂತ್ರಸ್ತೆ ಆರೋಪಿಗಳಿಗೆ ಪರಿಚಿತಳಾಗಿದ್ದಾಳೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News