ಬೇನಾಮಿ ಆಸ್ತಿಗಳ ಬಗ್ಗೆ ಮಾಹಿತಿದಾರರು ಬಹುಮಾನ ಪಡೆಯಲು ಆಧಾರ್ ಅಗತ್ಯ

Update: 2018-05-08 15:09 GMT

ಹೊಸದಿಲ್ಲಿ,ಮೇ 8: ಆದಾಯ ತೆರಿಗೆ ಇಲಾಖೆಯು ತಂದಿರುವ ಹೊಸ ‘ಮಾಹಿತಿದಾರರಿಗೆ ಪುರಸ್ಕಾರ ಯೋಜನೆ 2018’ ಕಪ್ಪುಹಣ ಜಾಲದ ಕುರಿತು ಮಾಹಿತಿ ನೀಡುವವರು ಬಹುಮಾನದ ಪೂರ್ಣ ಮೊತ್ತವನ್ನು ಪಡೆಯಲು ತಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ.

ಕೆಲವೊಮ್ಮೆ ಹಲವಾರು ವರ್ಷಗಳೇ ತಗಲುವ,ಅಂತಿಮ ಬಹುಮಾನದ ಹಣವನ್ನು ವಿತರಿಸುವ ಸಂದರ್ಭದಲ್ಲಿ ಮಾಹಿತಿದಾರರ ಗುರುತನ್ನು ಖಚಿತ ಪಡಿಸಿಕೊಳ್ಳುವಲ್ಲಿ ಎದುರಾಗುತ್ತಿರುವ ತೊಡಕುಗಳನ್ನು ನಿವಾರಿಸಲು ತಾನು ಈ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ಇಲಾಖೆಯು ಹೇಳಿದೆ.

2007ರಲ್ಲಿ ಜಾರಿಗೊಳಿಸಲಾಗಿದ್ದ ಹಿಂದಿನ ಯೋಜನೆಯಡಿ ಹೆಚ್ಚಿನವರಿಗೆ ತಕ್ಷಣದ ಬಹುಮಾನದ ಮೊತ್ತ ಒಂದು ಲಕ್ಷ ರೂ.ಗಳನ್ನು ವಿತರಿಸಲಾಗಿತ್ತಾದರೂ ಅದಕ್ಕೂ ದೊಡ್ಡದಾಗಿದ್ದ ಅಂತಿಮ ಬಹುಮಾನದ ಹಣವನ್ನು ಪಡೆಯಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ. ಕಾಲಕ್ರಮೇಣ ನಿರ್ದಿಷ್ಟ ಮಾಹಿತಿದಾರನೊಂದಿಗೆ ವ್ಯವಹರಿಸಿದ ಅಧಿಕಾರಿಗಳು ವರ್ಗಾವಣೆಗೊಂಡು,ಹೊಸ ಅಧಿಕಾರಿಗಳಿಗೆ ಸದ್ರಿ ಮಾಹಿತಿದಾರನ ಗುರುತು ಖಚಿತಪಡಿಸಿಕೊಳ್ಳುವುದು ಕಠಿಣವಾಗುತ್ತಿದ್ದುದು ಇದಕ್ಕೆ ಕಾರಣವಾಗಿತ್ತು ಎಂದು ಅವು ಹೇಳಿವೆ.

ಹಿಂದಿನ ಯೋಜನೆಯಡಿ ವ್ಯಕ್ತಿಯೋರ್ವ ಮಾಹಿತಿದಾರನಾಗಲು ಇಲಾಖೆಗೆ ತನ್ನ ಮತ್ತು ತನ್ನ ತಂದೆಯ ಹೆಸರುಗಳನ್ನು ಮಾತ್ರ ನೀಡಬೇಕಿತ್ತು. ತಿದ್ದುಪಡಿಗೊಂಡಿರುವ ಯೋಜನೆಯಡಿಯೂ ಗೌಪ್ಯವನ್ನು ಕಾಪಾಡಿಕೊಳ್ಳಲು ಇಲಾಖೆಯು ಮಾಹಿತಿದಾರನ ಫೋಟೊ ಪಡೆದುಕೊಳ್ಳುವುದಿಲ್ಲ,ಆದರೆ ಅಂತಿಮ ಬಹುಮಾನದ ವಿತರಣೆ ಸಂದರ್ಭ ಮಾಹಿತಿದಾರನ ಗುರುತನ್ನು ದೃಢಪಡಿಸಿಕೊಳ್ಳಬೇಕಾಗುತ್ತದೆ.

ಎಲ್ಲ ಕಾನೂನು ಪ್ರಕ್ರಿಯೆಗಳು ಮುಗಿಯುವವರೆಗೂ ಕಾಯಬೇಕಾಗುವುದರಿಂದ ಬೇನಾಮಿ ಆಸ್ತಿ, ತೆರಿಗೆ ವಂಚನೆ ಅಥವಾ ಕಪ್ಪುಹಣದ ಮಾಹಿತಿ ನೀಡಿದವರಿಗೆ ಅಂತಿಮ ಬಹುಮಾನ ವಿತರಿಸಲು ಕೆಲವು ವರ್ಷಗಳು ತಗುಲಬಹುದು ಮತ್ತು ಈ ಅವಧಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ವರ್ಗಾವಣೆಗೊಳ್ಳಬಹುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ವಕ್ತಾರರಾದ ಸುರಭಿ ಅಹ್ಲುವಾಲಿಯಾ ಹೇಳಿದರು.

ತಾನು ಮಾಹಿತಿಯನ್ನು ಒದಗಿಸಿದ್ದ ನಿಜವಾದ ವ್ಯಕ್ತಿಗೇ ಬಹುಮಾನ ನೀಡುತ್ತಿರುವುದನ್ನು ಇಲಾಖೆಯು ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಹೀಗಾಗಿ ಮಾಹಿತಿದಾರರು ತಮ್ಮ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದೆ. ಮಾಹಿತಿದಾರರು ವಿದೇಶಿಯರಾಗಿದ್ದರೆ ಆಧಾರ್ ಬದಲಿಗೆ ತಮ್ಮ ಪಾಸ್‌ಪೋರ್ಟ್ ಸಂಖ್ಯೆಯನ್ನು ಅವರು ನೀಡಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News