×
Ad

ಹೆತ್ತವರು ಅಂಗಾಂಗ ದಾನ ದಾಖಲೆಗೆ ಸಹಿ ಹಾಕಿದ ನಂತರ ಮಿದುಳು ಸಾವಿಗೀಡಾಗಿದ್ದ ಬಾಲಕ ಪುನಃ ಜೀವಂತ

Update: 2018-05-08 21:06 IST

ಅಲಬಾಮಾ, ಮೇ.8: ಇಲ್ಲಿನ ಮೊಬೈಲ್ ಸಿಟಿಯಲ್ಲಿ ನಡೆದ ಪವಾಡವೊಂದರಲ್ಲಿ ಅಪಘಾತವೊಂದರಲ್ಲಿ ಮೆದುಳು ಸ್ತಬ್ಧಗೊಂಡ 13ರ ಹರೆಯದ ಬಾಲಕನೊಬ್ಬ ಮರುಜೀವ ಪಡೆದ ಘಟನೆ ವರದಿಯಾಗಿದೆ. ಬಾಲಕನ ಹೆತ್ತವರು ಆತನ ಅಂಗಾಂಗ ದಾನ ಮಾಡಲು ಮುಂದಾಗಿ ಆ ಕುರಿತ ಪತ್ರಕ್ಕೆ ಸಹಿ ಹಾಕಿದ ನಂತರ ಬಾಲಕ ಸಾವಿನಿಂದ ಮರಳಿ ಬಂದಿರುವುದು ಎಲ್ಲರನ್ನೂ ಅಚ್ಚರಿಗೆ ದೂಡಿದೆ.

ಎರಡು ತಿಂಗಳ ಹಿಂದೆ ಬಾಲಕ ಟ್ರೆಂಟನ್ ಮ್ಯಕಿನ್ಲಿ ವಾಹನವೊಂದರಲ್ಲಿ ಸಾಗುತ್ತಿದ್ದ ವೇಳೆ ಅದು ಅಪಘಾತಕ್ಕೀಡಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಫಾಕ್ಸ್ 10 ವರದಿ ಮಾಡಿದೆ. ನಿಮ್ಮ ಮಗನ ಮೆದುಳಿಗೆ ಗಂಭೀರ ಹಾನಿಯಾಗಿದ್ದು ಆತ ಬದುಕುಳಿದರೂ ಕೋಮಾ ಸ್ಥಿತಿಯಲ್ಲಿರುತ್ತಾನೆ ಮತ್ತು ಅದರಿಂದ ಹೊರಬಾರದೆ ಇರಬಹುದು ಎಂದು ವೈದ್ಯರು ತಿಳಿಸಿದ್ದರು ಎಂದು ಟ್ರೆಂಟನ್ ತಾಯಿ ಜೆನಿಫರ್ ರೆಂಡಿ ತಿಳಿಸಿದ್ದಾರೆ. ಹಾಗಾಗಿ ನಾನು ಮಗನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದೆ. ಆಮೂಲಕ ಇತರ ಮಕ್ಕಳಿಗೆ ಜೀವದಾನ ನೀಡಲು ಬಯಸಿದೆ. ಐದು ಮಕ್ಕಳಿಗೆ ಅಂಗಾಂಗ ಕಸಿಯ ಅಗತ್ಯವಿತ್ತು ಮತ್ತು ಟ್ರೆಂಟನ್ ಅಂಗಗಳು ಅವರಿಗೆ ಸರಿಹೊಂದುತ್ತಿದ್ದವು.ಆತ ಮರಳಿ ಬರುತ್ತಾನೆ ಎಂದು ಕಾಯುವುದರಿಂದ ಏನೂ ಪ್ರಯೋಜನವಿರಲಿಲ್ಲ.

ಇದರಿಂದ ಆತನ ಅಂಗಾಂಗಗಳಿಗೆ ಮತ್ತಷ್ಟು ಹಾನಿಯಾಗುತ್ತಿತ್ತು ಎಂದು ರೆಂಡಿ ಫಕ್ಸ್ 10 ಟಿವಿಗೆ ತಿಳಿಸಿದ್ದಾರೆ. ಆದರೆ ಇನ್ನೇನು ವೈದ್ಯರು ಟ್ರೆಂಟನ್‌ಗೆ ನೀಡಿದ್ದ ಜೀವಪೂರಕ ವ್ಯವಸ್ಥೆಯನ್ನು ತೆಗೆಯಬೇಕು ಎಂದು ಯೋಚಿಸುತ್ತಿದ್ದಾಗಲೇ ಚಮತ್ಕಾರವೊಂದು ನಡೆಯಿತು. ಟ್ರೆಂಟನ್‌ನ ಮೆದುಳು ಸಕ್ರಿಯವಾಗುತ್ತಿರುವ ಲಕ್ಷಣಗಳನ್ನು ತೋರಿಸಿದವು. ಮಾರ್ಚ್ ಕೊನೆಯಾಗುತ್ತಿದ್ದಂತೆ ಟ್ರೆಂಟನ್ ತಾನಾಗಿಯೇ ಉಸಿರಾಡಲು ಆರಂಭಿಸಿದ್ದ ಮತ್ತು ಪೂರ್ತಿ ವಾಕ್ಯ ಮಾತನಾಡಲು ಶಕ್ತನಾದ ಎಂದು ರೆಂಡಿ ತಿಳಿಸಿದ್ದಾರೆ. ಮೆದುಳು ನಿಷ್ಕ್ರಿಯಗೊಂಡಾಗ ತನಗಾದ ಅನುಭವದ ಕುರಿತು ಮಾತನಾಡಿದ ಟ್ರೆಂಟನ್, ನಾನು ಬಯಲು ಪ್ರದೇಶದಲ್ಲಿ ನಡೆದಾಡುತ್ತಿದ್ದೆ. ಇದಕ್ಕೆ ಬೇರೇನೂ ವಿವರಣೆ ನೀಡಲು ಸಾಧ್ಯವಿಲ್ಲ. ದೇವರೇ ನನ್ನನ್ನು ಕೈಹಿಡಿದರು. ಹಾಗಂತ ವೈದ್ಯರೂ ಹೇಳುತ್ತಾರೆ ಎಂದು ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News