ರೈಯವರ ಆಯ್ಕೆ ಖಚಿತ: ಯುವ ಕಾಂಗ್ರೆಸ್
ಬಂಟ್ವಾಳ, ಮೇ 8: ರಮಾನಾಥ ರೈಯವರಿಗೆ ಕ್ಷೇತ್ರದ ಯುವಜನತೆ ಸಂಪೂರ್ಣ ಬೆಂಬಲ ನೀಡಲಿದ್ದು, ಚುನಾವಣೆಯಲ್ಲಿ ರೈಯವರ ಆಯ್ಕೆ ಖಚಿತ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್‌ಕುಲಾಲ್ ಹೇಳಿದ್ದಾರೆ.
ಮಂಗಳವಾರ ಬಿ.ಸಿ.ರೋಡ್‌ನ ಕಾಂಗ್ರೆಸ್ ಪ್ರಚಾರ ಸಮಿತಿಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಮಾನಾಥ ರೈ ಯವರ ಜನಪರ ನೀತಿಯನ್ನು ಬೆಂಬಲಿಸಿ ನೂರಾರು ಯುವಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಅಪಪ್ರಚಾರ ನಡೆಸುವ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಯುವಕರ ಅಭ್ಯುದಯಕ್ಕೆ ಅನೇಕ ಯೋಜನೆಗಳನ್ನು ಹಾಕಿಕೊಟ್ಟಿದೆ. ಲಕ್ಷಾಂತರ ಮಂದಿ ಯುವಕರು ಪದವಿಗಳಿಸಿ ಕಾಲೇಜುಗಳಿಂದ ಹೊರಬಾರುತ್ತಿದ್ದಾರೆ. ಅವರಿಗೆ ಸ್ವ-ಉದ್ಯೋಗಕ್ಕೆ ಕಾಂಗ್ರೆಸ್ ಒತ್ತು ನೀಡಿದೆ. ದೇಶದಲ್ಲಿ ಒಟ್ಟು ಸೃಷ್ಟಿಯಾದ ಉದ್ಯೋಗದಲ್ಲಿ ಶೇ. 25 ಕರ್ನಾಟಕದಲ್ಲಿ ಆಗಿದ್ದು ಇದೊಂದು ಹೆಮ್ಮೆಯ ಸಂಗತಿ ಎಂದರು.
ಈ ಬಾರಿಯ ಚುನಾವಣೆಯ ಪ್ರಣಾಳಿಕೆಯಲ್ಲಿ ಪಕ್ಷವು ಯುವಕರನ್ನು ಗಮನದಲ್ಲಿರಿಸಿ ಅನೇಕ ಯೋಜನೆಗಳ ಭರವಸೆಗಳನ್ನು ನೀಡಿದೆ. ಸರಕಾರಿ ಶಾಲೆಗಳ 12ನೆ ತರಗತಿವರೆಗೆ ಉಚಿತ ಶಿಕ್ಷಣ, 18 ರಿಂದ 23 ವರ್ಷ ಪ್ರಾಯದ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್, ವೃತ್ತಿತರಬೇತಿ ವಿಶ್ವವಿದ್ಯಾಲಯವನ್ನು ಕೌಶಲ್ಯಾಭಿವೃದ್ಧಿಗಾಗಿ ರಚನೆ. ಕಾಲೇಜುಗಳು ಮತ್ತು ವಿವಿಗಳಲ್ಲಿ ಅಂತರ್ಜಾಲ ಸಂಪರ್ಕ, ಪ್ರೌಢ ಶಾಲಾ ಹಂತದಲ್ಲಿಯೇ ವೃತ್ತಿಪರ ಶಿಕ್ಷಣ ಆರಂಭ. ರಾಜ್ಯದ ಐದು ವಿವಿಗಳನ್ನು ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನಾಗಿಸುವುದು. ಮೊರಾರ್ಜಿ ದೇಸಾಯಿ ಶಾಲೆಗಳನ್ನು ಪಿಯುಸಿ ಮಟ್ಟಕ್ಕೆ ಮೇಲ್ದರ್ಜೆಗೇರಿಸುವುದು. ಸ್ನಾತಕೋತ್ತರ ಮಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ. ಮೆಟ್ರಿಕ್‌ಗಿಂತ ಕಡಿಮೆ ಓದಿದ ಮಹಿಳೆಯರಿಗೆ ಆರ್‌ಟಿಒದಲ್ಲಿ ಉಚಿತ ಮೋಟಾರು ವಾಹನ ತರಬೇತಿ ಹಾಗೂ ರಿಯಾಯಿತಿ ದರದಲ್ಲಿ ಆಟೊರಿಕ್ಷಾ ಹಾಗೂ ಮೋಟಾರು ಕಾರುಗಳನ್ನು ಒದಗಿಸುವ ಯೋಜನೆಗಳು ನಿಜಕ್ಕೂ ಜನೋಪಯೋಗಿಯಾಗಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಶ ನಾಯಕ್, ಉಪಾಧ್ಯಕ್ಷ ಚಿತ್ತರಂಜನ ಶೆಟ್ಟಿ, ಇಬ್ರಾಹಿಂ ನವಾಜ್, ಶಾಕೀರ್ ಬಡಕಬೈಲು, ನೌಫಾಲ್ ಕನ್ಯಾನ, ವಿಶ್ವನಾಥಗೌಡ ಮಣಿ, ಯೋಗೀಶ್ ದಾಸಬೈಲು ಉಪಸ್ಥಿತರಿದ್ದರು