ಕರ್ನಾಟಕದ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರಿಗೆ ಇಚ್ಛೆಯಂತೆ ತೆರಳಲು ಅವಕಾಶ ನೀಡಿದ ಸುಪ್ರೀಂ
ಹೊಸದಿಲ್ಲಿ, ಮೇ 8: ಬಲವಂತಕ್ಕೆ ಕಟ್ಟುಬಿದ್ದು ವಿವಾಹವಾದ ಕರ್ನಾಟಕದ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರಿಗೆ ಸೋಮವಾರ ಇಚ್ಛೆಯಂತೆ ತೆರಳುವ ಅವಕಾಶ ನೀಡಿರುವ ಸುಪ್ರೀಂ ಕೋರ್ಟ್, ಶಿಕ್ಷಣ ಮುಂದುವರಿಸುವಂತೆ ಹಾಗೂ ಭವಿಷ್ಯ ರೂಪಿಸಿಕೊಳ್ಳುವಂತೆ ಸೂಚಿಸಿದೆ.
ಕಂಪ್ಯೂಟರ್ ಇಂಜಿನಿಯರ್ ಆಗಿರುವ ಮಹಿಳೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಹಾಜರಾಗಿದ್ದಾರೆ ಹಾಗೂ ತನ್ನ ಇಚ್ಛೆಗೆ ವಿರುದ್ಧವಾಗಿ ಮಾಡಲಾದ ವಿವಾಹವನ್ನು ರದ್ದುಗೊಳಿಸುವಂತೆ ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಹಾಗೂ ಉದ್ಯೋಗ ಪಡೆಯಲು ರಕ್ಷಣೆ ನೀಡುವಂತೆ ಕೋರಿದ್ದಾರೆ. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವೈವಾಹಿಕ ಹಾಗೂ ಪೋಷಕರ ಬಂಧನದಿಂದ ಕಳಚಿಕೊಳ್ಳುವಂತೆ ಹಾಗೂ ಇಚ್ಛೆಯಂತೆ ತೆರಳುವಂತೆ ಮಹಿಳೆಗೆ ಸೂಚಿಸಿತು. ‘‘ನೀನು ಪ್ರಾಪ್ತ ವಯಸ್ಕಳು. ಎಲ್ಲಿಗೆ ಬೇಕಾದರೂ ಹೋಗಲು ಹಾಗೂ ಇಚ್ಛೆಯಂತೆ ಮುಂದುವರಿಯಲು ನೀನು ಸ್ವತಂತ್ರಳು’’ ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಆಕೆಯ ಕುಟುಂಬ, ಗಂಡ ಸೇರಿದಂತೆ ಯಾರೂ ಕೂಡ ಆಕೆಯನ್ನು ಒತ್ತಾಯಿಸುವಂತೆ ಇಲ್ಲ ಎಂದಿದೆ.
ಯುವತಿಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ನ್ಯಾಯವಾದಿ ಇಂದಿರಾ ಜೈಸಿಂಗ್, ಶಿಕ್ಷಣ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಆಕೆಯ ಹೆತ್ತವರಲ್ಲಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು. ಸುಪ್ರೀಂ ಕೋರ್ಟ್‌ನ ಆದೇಶದ ಬಳಿಕ ಮಹಿಳೆಯ ಕುಟುಂಬ, ಆಕೆಗೆ ಕಿರುಕುಳ ನೀಡುವುದಿಲ್ಲ ಹಾಗೂ ಎಲ್ಲ ದಾಖಲೆಗಳನ್ನು ಹಿಂದಿರುಗಿಸಲಾಗುವುದು ಎಂದು ನ್ಯಾಯಾಧೀಶರಿಗೆ ಭರವಸೆ ನೀಡಿತು. ಯುವತಿ ವಿಚ್ಛೇದನ ಪ್ರಕ್ರಿಯೆಯನ್ನು ಆರಂಭಿಸಿದ್ದಾಳೆ ಎಂದು ಜೈಸಿಂಗ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಪೋಷಕರು ಹಾಗೂ ಪತಿ ಪ್ರತೀಕಾರ ತೀರಿಸಿಕೊಳ್ಳುವ ಆತಂಕ ಮಹಿಳೆಗೆ ಇದೆ ಎಂದು ಜೈಸಿಂಗ್ ಸುಪ್ರೀಂ ಕೋರ್ಟ್‌ನಲ್ಲಿ ತಿಳಿಸಿದರು. ‘‘ತಾಯಿಯ ಬೆಂಬಲ ಪಡೆದಿರುವ ಆಕೆಯ ಸಹೋದರ ಬೆದರಿಕೆ ಒಡ್ಡಿದ್ದಾನೆ’’ ಎಂದು ಜೈಸಿಂಗ್ ಹೇಳಿದರು ಹಾಗೂ ಪೋಷಕರು ಹಾಗೂ ಗಂಡನ ಕಡೆಯಿಂದ ಯಾವುದೇ ದಬ್ಬಾಳಿಕೆ ನಡೆಯದಂತೆ ಆಕೆಗೆ ರಕ್ಷಣೆ ನೀಡುವಂತೆ ಕೋರಿದರು. ಪೀಠ, ‘‘ಆಕೆ ತನಗೆ ಇಚ್ಛೆ ಇರುವ ಯಾವುದೇ ಸ್ಥಳಕ್ಕೆ ತೆರಳಬಹುದು; ಪೋಷಕರು, ಕುಟುಂಬದವರು, ಗಂಡ ಹಾಗೂ ಗಂಡನ ಕುಟುಂಬದವರು ಆಕೆಯ ದಾರಿಗೆ ತಡೆ ಒಡ್ಡುವಂತಿಲ್ಲ’’ ಎಂದು ಹೇಳಿತು. ಕರ್ನಾಟಕದ ರಾಜಕಾರಣಿಯೊಬ್ಬರು ತಮ್ಮ ಪುತ್ರಿಯನ್ನು ಆಕೆಯ ಪ್ರಿಯಕರನಿಗೆ ಬದಲು ಬೇರೊಬ್ಬ ವ್ಯಕ್ತಿಗೆ ಮಾರ್ಚ್ 14ರಂದು ವಿವಾಹ ಮಾಡಿ ಕೊಟ್ಟಿದ್ದರು. ದಿಲ್ಲಿಯಲ್ಲಿರುವ ಪತಿಯ ಮನೆಗೆ ಬಂದ ಯುವತಿ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಳು.
ರಕ್ಷಣೆಯ ನಿರ್ದೇಶನ ನೀಡಿದ ಸುಪ್ರೀಂ
ತನ್ನ ಜೀವಕ್ಕೆ ಅಪಾಯ ಇದೆ. ಆದುದರಿಂದ ರಕ್ಷಣೆ ನೀಡುವಂತೆ ಮಹಿಳೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. ಮಹಿಳೆಯ ಮನವಿ ಪರಿಗಣಿಸಿರುವ ಪೀಠ, ಬೆಂಗಳೂರಿನಲ್ಲಿ ಶಿಕ್ಷಣ ಹಾಗೂ ಉದ್ಯೋಗ ಪಡೆಯಲಿರುವ ಮಹಿಳೆಗೆ ರಕ್ಷಣೆ ನೀಡುವಂತೆ ಕರ್ನಾಟಕ ಪೊಲೀಸರಿಗೆ ನಿರ್ದೇಶಿಸಿದೆ.