×
Ad

ಸೊರಕೆ ಪಿಎ ಮನೆ ಮೇಲೆ ಚುನಾವಣಾ ಆಯೋಗ ದಾಳಿ

Update: 2018-05-08 22:19 IST

ಬ್ರಹ್ಮಾವರ, ಮೇ 8: ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಅವರ ಆಪ್ತ ಸಹಾಯಕ ಅಶೋಕ್ ಎಂಬವರ ಬ್ರಹ್ಮಾವರದ ಮನೆಯ ಮೇಲೆ ಮಂಗಳವಾರ ಚುನಾವಣಾ ಆಯೋಗದ ತಂಡ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಸಂಜೆ 4ಗಂಟೆಗೆ ಸುಮಾರು 40 ಮಂದಿ ಅಧಿಕಾರಿಗಳ ತಂಡ ಆಗಮಿಸಿ ಅವರ ಮನೆಯಲ್ಲಿ ಹುಡುಕಾಟ ನಡೆಸಿದೆ ಎನ್ನಲಾಗಿದೆ. ಆಶೋಕ್ ಅವರು ಸೊರಕೆಯವರೊಂದಿಗೆ ಚುನಾವಣಾ ಪ್ರಚಾರದಲ್ಲಿದ್ದು, ಪತ್ನಿ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಅವರ  ಮಗಳು ಮಾತ್ರ ಇದ್ದರೆನ್ನಲಾಗಿದೆ.

ಮನೆಯನ್ನು ಜಾಲಾಡಿದ ಅಧಿಕಾರಿಗಳು ಯಾವುದೇ ವಸ್ತುಗಳು ಸಿಗದೇ ಬರಿಕೈಯಲ್ಲಿ ಹಿಂತಿರುಗಿದ್ದಾರೆ ಎಂದು ತಿಳಿದು ಬಂದಿದೆ. ''ಇತ್ತೀಚೆಗೆ ನನ್ನ ಮನೆಗೂ ದಾಳಿ ನಡೆದಿದ್ದು, ಈ ಎರಡೂ ದಾಳಿಗಳು ಸೊರಕೆ ಅವರನ್ನು ಚುನಾವಣೆಯಲ್ಲಿ ಸೋಲಿಸುವುದಕ್ಕೆ ಸಾಧ್ಯವಾಗದೇ ಬಿಜೆಪಿ ನಾಯಕರು ನೀಡಿದ ಸುಳ್ಳು ದೂರಿನ ಹಿನ್ನೆಲೆಯಲ್ಲಿ ಆಗಿದೆ. ಸೊರಕೆ ಅವರನ್ನು ಮತ್ತು ಗೆಲ್ಲುವ ಉತ್ಸಾಹದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಇದಾಗಿದೆ'' ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News