ಕಾಪು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು: ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ ವಿಶ್ವಾಸ
ಕಾಪು, ಮೇ 8: ಕಾಪು ಕ್ಷೇತ್ರ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಈ ನಿಟ್ಟಿನಲ್ಲಿ ಮತದಾರರ ಒಳವು ಜೆಡಿಎಸ್ ಕಡೆ ಇದೆ. ಈ ಭಾರಿಯ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬೀಳಲಿದೆ ಎಂದು ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ ಹೇಳಿದ್ದಾರೆ.
ಅವರು ಕಾಪು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಚುನಾವಣೆಯಲ್ಲಿ ಜೆಡಿಎಸ್ ಗೆಲವು ಸಾಧಿಸುವ ಮೂಲಕ ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಮರಳು ನೀತಿಯ ಸರಳೀಕರಣ, ಬೃಹತ್ ಕಂಪೆನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ, ಹೆಜಮಾಡಿ ಕಿರು ಮೀನುಗಾರಿಕಾ ಬಂದರು ಅಭಿವೃದ್ಧಿಯನ್ನು ಇದುವರೆಗಿನ ಶಾಸಕರಿಂದ ಮಾಡಲು ಆಗಿರಲಿಲ್ಲ. ಜೆಡಿಎಸ್ ಪಕ್ಷ ಈ ಯೋಜನೆ ಸಹಿತ ಕ್ಷೇತ್ರದ ಮೂಲ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಿದ್ದೇವೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಮಾತನಾಡಿ, ಜಿಲ್ಲೆಯಲ್ಲಿ ಈ ಭಾರಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾರ್ಕಳದಲ್ಲಿ ಬಿಎಸ್‌ಪಿಗೆ ಬೆಂಬಲ ಸೂಚಿಸಲಿದ್ದೇವೆ. ಜಿಲ್ಲಾದ್ಯಂತ ಜೆಡಿಎಸ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಎಲ್ಲಾ ಬೂತ್ ಸಮಿತಿಗಳನ್ನು ರಚಿಸಿದ್ದು, ಉತ್ತಮ ರೀತಿಯಲ್ಲಿ ಪಕ್ಷ ಸಂಘಟನೆಯಾಗಿದೆ ಎಂದರು.
ಕಾಪು ಕ್ಷೇತ್ರವನ್ನು ಪ್ರವಾಸೋಧ್ಯಮ ಕ್ಷೇತ್ರವನ್ನಾಗಿಸಲು ಎಲ್ಲಾ ರೀತಿಯ ಅವಕಾಶಗಳಿವೆ. ಆದರೆ ಇದುವರೆಗೆ ಶಾಸಕರಾಗಿದ್ದವರು ಈ ನಿಟ್ಟಿನಲ್ಲಿ ಚಿಂತಿಸಲಿಲ್ಲ. ಮುಂದೆ ಜೆಡಿಎಸ್ ಜಯಗಳಿಸಿದಲ್ಲಿ ಪ್ರವಾಸೋಧ್ಯಮಕ್ಕೆ ಒತ್ತು ನೀಡಲಾಗುವುದು. ಅಲ್ಲದೆ ಸಮುದ್ರ ಕೊರತೆ ತಡೆಯುವಲ್ಲಿ ಶಾಸಕರಿಂದ ಶಾಶ್ವತ ತಡೆಗೋಡೆ ನಿರ್ಮಾಣವಾಗಲಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಅಲ್ಲದೆ ಹೆಜಮಾಡಿಯ ಮೀನುಗಾರಿಕಾ ಬಂದರು ನಿರ್ಮಾಣ ಮಾಡುವುದಾಗಿ ಅವರು ಹೇಳಿದರು.
ಪಕ್ಷದ ಮುಖಂಡರಾದ ವಾಸುದೇವ ರಾವ್, ಜಯರಾಮ ಆಚಾರ್ಯ, ಶೇಖರ್ ಕೋಟ್ಯಾನ್, ವೆಂಕಟೇಶ್ ಎಂ.ಟಿ, ಯೂಸುಫ್ ಉಪಸ್ಥಿತರಿದ್ದರು.