ಹಿರಿಯಡ್ಕ ಗೋಪಾಲ ರಾಯರಿಗೆ ಮಲ್ಪೆ ಶಂಕರ ನಾರಾಯಣ ಪ್ರಶಸ್ತಿ ಪ್ರಧಾನ ಸಮಾರಂಭ
ಮಂಗಳೂರು, ಮೇ 8: ಹಿರಿಯ ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲ ರವರಿಗೆ ಮಲ್ಪೆ ಶಂಕರನರಾಯಣ ಪ್ರಶಸ್ತಿಯನ್ನು ಕಲ್ಕೂರ ಪ್ರತಿಷ್ಟಾನದ ವತಿಯಿಂದ ನಗರದ ಮಂಗಳಾ ದೇವಿ ದೇವಸ್ಥಾನದ ಆವರಣದ ಸಭಾಂಗಣದಲ್ಲಿ ಇಂದು ಅವರ ಅನುಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಅನಾರೋಗ್ಯದ ನಿಮಿತ್ತ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವ ಗೋಪಾಲ ರಾಯರಿಗೆ ಅವರ ಮನೆಗೆ ಪ್ರಶಸ್ತಿ ತಲುಪಿಸಿ ಗೌರವಿಸುವುದಾಗಿ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
ಪ್ರದೀಪ್ ಕುಮಾರ್ ಕಲ್ಕೂರರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಛ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡುತ್ತಾ ಯಕ್ಷಗಾನ ಭಾಷಾ ಬೆಳವಣಿಗೆಗೆ ಹಾಗೂ ಭಾಷೆಯ ಶುದ್ಧ ಪ್ರಯೋಗಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದ ಕಲೆ ಇಂತಹ ಕಲಾವಿದರಿಗೆ ಕರ್ಣಾಟಕ ಬ್ಯಾಂಕ್ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾತನಾಡಿದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ ಮಾತನಾಡುತ್ತಾ, ಹಿರಿಯಡ್ಕ ಗೋಪಾಲ ರಾಯರು ಯಕ್ಷಗಾನ ರಂಗದ ಎಲ್ಲಾ ವಿಭಾಗಳಲ್ಲೂ ದುಡಿದ ಕಲಾವಿದರು ಮದ್ದಳೆಯಲ್ಲಿ ‘ಏರು ಮದ್ದಳೆ ’ಯನ್ನು ಯಕ್ಷಲೋಕಕಕ್ಕೆ ಮೊದಲು ಪರಿಚಯಿಸಿದ ಕಲಾವಿದ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಮಂಗಳಾ ದೇವಿ ದೇವಸ್ಥಾನದ ಆಡಳಿತ ಮೊಕ್ಕೇಸರ ರಮಾನಾಥ ಹೆಗ್ಡೆ,ಹಿರಿಯ ಯಕ್ಷಗಾನ ಕಲಾವಿದ ಹಾಗೂ ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್, ಕಲ್ಕೂರ ಯಜಮಾನ ಸಿರಿ ಪ್ರಸಸ್ತಿ ಪಡೆದ ಕಿಶನ್ ಹೆಗ್ಡೆ, ಜರ್ನಾದನ ಹಂದೆ, ಪೊಳಲಿ ನಿತ್ಯಾನಂದ ಕಾರಂತ, ರತ್ನಾಕರ ಜೈನ್, ತಾರಾನಾಥ ಶೆಟ್ಟಿ ಬೋಳೂರು, ಪ್ರಶಾಂತ್ ಶೇಟ್ ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.