ಜಾತ್ಯತೀತ ಪಕ್ಷವನ್ನು ಗೆಲ್ಲಿಸಲು ಸುನ್ನೀ ಉಲಮಾಗಳ ಕರೆ
ಮಂಗಳೂರು, ಮೇ 8: ಪ್ರಜಾಪ್ರಭುತ್ವ ಭಾರತದಲ್ಲಿ ಚುನಾವಣೆಯು ಪ್ರಜೆಗಳ ಪಾಲಿಗೆ ಅತ್ಯಂತ ಪ್ರಬಲ ಅಸ್ತ್ರವಾಗಿದ್ದು, ಮೇ 12ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸಿ, ಜಾತ್ಯತೀತ ಪಕ್ಷವನ್ನು ಗೆಲ್ಲಿಸಬೇಕೆಂದು ಸುನ್ನೀ ಉಲಮಾ ನಾಯಕರು ಕರೆ ನೀಡಿದ್ದಾರೆ.
ಭಾರತೀಯ ವ್ಯವಸ್ಥೆಯಲ್ಲಿ ರಾಜಕೀಯ ಪಾಲುದಾರಿಕೆ ಧಾರ್ಮಿಕ ವ್ಯಕ್ತಿಗಳೂ ಸೇರಿದಂತೆ ಪ್ರತಿಯೊಬ್ಬ ಪ್ರಜೆಗೂ ಅನಿವಾರ್ಯವಾಗಿದೆ. ಬಹು ಸಂಸ್ಕೃತಿಯ ಭಾರತೀಯ ಪರಂಪರೆಯು ಇಂದು ಕೋಮುವಾದಿ ಶಕ್ತಿಗಳಿಂದಾಗಿ ಅಪಾಯಕ್ಕೀಡಾಗಿದ್ದು, ಇದರ ವಿರುದ್ಧ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸುನ್ನೀ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರೋಧವಾಗಿ ನಿಲ್ಲುವುದಿಲ್ಲ. ಆದಾಗ್ಯೂ ಜಾತ್ಯತೀತ ಮತಗಳು ವಿಭಜನೆ ಗೊಂಡು ಅತಂತ್ರ ವಿಧಾನಸಭೆ ರೂಪುಗೊಳ್ಳುವ ಇಲ್ಲವೇ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೇರುವ ಸಾಧ್ಯತೆಯನ್ನು ತಡೆಯುವ ಸಲುವಾಗಿ ಜಯ ಸಾಧ್ಯತೆ ಹೆಚ್ಚಿರುವ ಪಕ್ಷವೊಂದನ್ನು ಬೆಂಬಲಿಸಬೇಕಾಗುತ್ತದೆ. ದೇಶದಲ್ಲಿ ಕಂಡು ಬರುತ್ತಿರುವ ಕೋಮುವಾದಿ ಅಸಹಿಷ್ಣುತೆ, ಆತಂಕಕಾರಿ ಬೆಳವಣಿಗೆಗಳನ್ನು ಸೋಲಿಸಲು ಜಾತ್ಯತೀತ ಕೈಗಳನ್ನು ಬಲಪಡಿಸಬೇಕಿದೆ. ಈ ನಿಟ್ಟಿನಲ್ಲಿ ಮತದಾನದ ಹಕ್ಕನ್ನು ಪ್ರಜ್ಞಾವಂತಿಕೆಯಿಂದ ಚಲಾಯಿಸುವಂತೆ ಉಲಮಾಗಳು ಆಗ್ರಹಿಸಿದ್ದಾರೆ.
ಕಳೆದ ಐದು ವರ್ಷಗಳ ಆಡಳಿತವನ್ನು ಅವಲೋಕಿಸಿದ ಸಭೆಯು, ಜನಪರ ಕಾಳಜಿ ಹಾಗೂ ಕೋಮು ಸೌಹಾರ್ದಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಸರಕಾರ ತೋರಿದ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿತು.
ಸುನ್ನೀ ಜಂಇಯತುಲ್ ಉಲಮಾ ರಾಜ್ಯಾಧ್ಯಕ್ಷ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ.ಮುಹಮ್ಮದ್ ಕಾಮಿಲ್, ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸಂ ಅಬ್ದುಲ್ ರಶೀದ್ ಝೈನಿ, ಸಹ ಕಾರ್ಯದರ್ಶಿ ಎಂ.ಎ.ಸಿದ್ದೀಖ್ ಸಖಾಫಿ, ಸದಸ್ಯರಾದ ಎಂ.ಇ.ಉಮರ್ ಸಖಾಫಿ, ಎಸ್‌ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ, ಮುಸ್ಲಿಮ್ ಜಮಾತ್ ಕೌನ್ಸಿಲ್ ಕಾರ್ಯದರ್ಶಿ ಅಬೂ ಸುಫ್ಯಾನ್ ಮದನಿ, ಸುನ್ನೀ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ, ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ಭಾಗವಹಿಸಿದ್ದರು.
ಅಪಪ್ರಚಾರಗಳಿಗೆ ಕಿವಿಗೊಡಬೇಡಿ
ಎಸ್ಸೆಸ್ಸೆಫ್ ಸೇರಿದಂತೆ ಸುನ್ನೀ ಸಂಘಟನೆಗಳು ನಿರ್ದಿಷ್ಟ ಪಕ್ಷದ ಕೆಲವು ಅಭ್ಯರ್ಥಿಗಳನ್ನು ಸೋಲಿಸಲು ತೀರ್ಮಾನ ಕೈಗೊಂಡಿದೆ ಎಂಬ ಅಪಪ್ರಚಾರ ನಡೆಯುತ್ತಿರುವುದು ಖಂಡನೀಯ. ನಮ್ಮ ಸಂಘಟನೆಗಳು ಯಾವತ್ತೂ ಯಾವುದೇ ವ್ಯಕ್ತಿ ಅಥವಾ ಅಭ್ಯರ್ಥಿಯ ಪರ ಅಥವಾ ವಿರುದ್ಧವಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದಿನ ಸರಕಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ನೀಡಿದ್ದ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಯಾರದೇ ವೈಯಕ್ತಿಕ ಹೇಳಿಕೆಗಳಿಗೆ ಸಂಘಟನೆ ಹೊಣೆಯಾಗಿರುವುದಿಲ್ಲ. ಸಂಘಟನೆಯ ನಿಲುವುಗಳನ್ನು ಬಹಿರಂಗಪಡಿಸಲು ಯಾರನ್ನೂ ವಕ್ತಾರರನ್ನಾಗಿ ನೇಮಿಸಲಾಗಿಲ್ಲ. ಆದ್ದರಿಂದ ಅಪಪ್ರಚಾರಗಳಿಗೆ ಯಾರೂ ಕಿವಿಗೊಡಬಾರದೆಂದು ಸುನ್ನೀ ಉಲಮಾ ನಾಯಕರು ಮನವಿ ಮಾಡಿದ್ದಾರೆ.