×
Ad

ಪ್ರಧಾನಿ ಹುದ್ದೆಯನ್ನು ಗ್ರಾಪಂ ಸದಸ್ಯನ ಮಟ್ಟಕ್ಕಿಳಿಸಿದ ಮೋದಿ: ಬಿ.ಕೆ.ಹರಿಪ್ರಸಾದ್ ಟೀಕೆ

Update: 2018-05-08 23:16 IST

ಉಡುಪಿ, ಮೇ 8: ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಸತತವಾಗಿ ಸುಳ್ಳುಗಳನ್ನು ಹೇಳುವ ಮೂಲಕ, ತನ್ನ ರಾಜಕೀಯ ಎದುರಾಳಿಗಳನ್ನು ವೈಯಕ್ತಿಕವಾಗಿ ನಿಂದಿಸುವ ಮೂಲಕ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿ ಹುದ್ದೆಯ ಗೌರವವನ್ನು ಗ್ರಾಪಂ ಸದಸ್ಯನ ಮಟ್ಟಕ್ಕೆ ಇಳಿಸಿದ್ದಾರೆ ಎಂದು ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, 2014ರಲ್ಲಿ ಸುಳ್ಳುಗಳೇ ತುಂಬಿರುವ ಆಕರ್ಷಕ ಭಾಷಣಗಳ ಮೂಲಕ ಜನರನ್ನು ಆಕರ್ಷಿಸಿ ಅಧಿಕಾರಕ್ಕೇರಿದ ಮೋದಿ, ಅಂದಿನಿಂದ ಇಂದಿನವರೆಗೆ ಕೇವಲ ಸುಳ್ಳುಗಳನ್ನು ಮಾತ್ರ ಹೇಳುತ್ತಾ ಬಂದಿದ್ದಾರೆ. ಅವರು ನೀಡಿರುವ ಆಶ್ವಾಸನೆಗಳಲ್ಲಿ ಒಂದನ್ನು ಸಹ ಈಡೇರಿಸಲು ವಿಫಲರಾಗಿದ್ದಾರೆ ಎಂದರು.

ಮೋದಿ ನುಡಿದಂತೆ ವಿದೇಶದಿಂದ ಭಾರತೀಯರ ಕಪ್ಪು ಹಣ ತಂದಿಲ್ಲ, ದಾವೂದ್ ಗ್ಯಾಂಗ್‌ನ್ನು ಬಂಧಿಸಿ ಭಾರತಕ್ಕೆ ತಂದಿಲ್ಲ, ಗಂಗಾ ನದಿಯನ್ನು ಸ್ವಚ್ಚಗೊಳಿಸಿಲ್ಲ, ದೇಶದ ಪ್ರತಿಯೊಬ್ಬ ಭಾರತೀಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕಿಲ್ಲ, ಬೆಲೆಯೇರಿಕೆ ತಡೆಗಟ್ಟಿಲ್ಲ, ಬಡರೈತರ ಸಾಲ ಮನ್ನಾ ಮಾಡಿಲ್ಲ, ಬುಲೆಟ್ ರೈಲು ಓಡಿಸಿಲ್ಲ. ಒಟ್ಟಾರೆ ಅವರು ಮಾತಿನ ಸುಳ್ಳಿನ ಭರವಸೆ ನೀಡುವ ‘ಸುಳ್ಳಿನ ಸರದಾರ’ ಎಂಬುದು ಕಳೆದ ನಾಲ್ಕು ವರ್ಷಗಳಲ್ಲಿ ಜನರಿಗೆ ಮನದಟ್ಟಾಗಿದೆ ಎಂದು ಹರಿಪ್ರಸಾದ್ ನುಡಿದರು.

ಕಳೆದ ಎರಡು ತಿಂಗಳಿಂದ ಸತತವಾಗಿ ಕರ್ನಾಟಕಕ್ಕೆ ಭೇಟಿ ನೀಡುವ ಮೂಲಕ ಅವರು ಹೊಸ ಇತಿಹಾಸ ಬರೆದಿದ್ದಾರೆ. ತಮ್ಮ ಚುನಾವಣಾ ಭಾಷಣದಲ್ಲಿ ಅವರು ಸುಳ್ಳಿನ ಭರವಸೆ ನೀಡುವುದನ್ನು ನಿಲ್ಲಿಸಿಲ್ಲ. ಇದೀಗ ನೇತ್ರಾವತಿ ಹಾಗೂ ಹೇಮಾವತಿ ನದಿ ಜೋಡಿಸುವ ಕನಸಿನಲ್ಲೂ ನೆನೆಸದ ಯೋಜನೆಯನ್ನು ಪ್ರಕಟಿಸಿದ್ದಾರೆ ಎಂದರು.

ಎರಡು ವರ್ಷಗಳ ಕಾಲ ಗುಜರಾತ್‌ನಿಂದ ಗಡಿಪಾರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಮ್ಮ ರಾಜ್ಯಕ್ಕೆ ಬಂದು ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಪಾಠ ಹೇಳುತ್ತಾರೆ ಎಂದು ಟೀಕಿಸಿದ ಹರಿಪ್ರಸಾದ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ಹೇಳಿಕೆಯನ್ನು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚುನಾವಣೆಯಲ್ಲಿ ಎಐಸಿಸಿ ವೀಕ್ಷಕ ಡೊಮಿನಿಕ್ ಪ್ರಸಂಟೇಷನ್, ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ನಾಯಕರಾದ ಮಾರ್ಕ್ ಸಲ್ಡಾನ, ನವೀನ್ ಡಿಸೋಜ, ಕಿಶನ್ ಹೆಗ್ಡೆ, ದಿನೇಶ್ ಪುತ್ರನ್, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News