ಸ್ಪಷ್ಟ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸಿ, ಸ್ಥಿರ ಸರಕಾರ ನೀಡಿ: ಮತದಾರರಿಗೆ ಪಿ.ಚಿದಂಬರಂ ಕರೆ

Update: 2018-05-09 09:47 GMT

ಮಂಗಳೂರು, ಮೇ 9: ರಾಜ್ಯದಲ್ಲಿ ಈ ಬಾರಿಯೂ ಕಾಂಗ್ರೆಸ್ ಪಕ್ಷವನ್ನು ಸ್ಪಷ್ಟ ಬಹುಮತದೊಂದಿಗೆ ಗೆಲ್ಲಿಸಿ, ಸ್ಥಿರ ಸರಕಾರಕ್ಕೆ ಅವಕಾಶ ನೀಡಿ ರಾಜ್ಯದ  ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಮತದಾರರಿಗೆ ಕರೆ ನೀಡಿದ್ದಾರೆ. 

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೇ 12ರ ವಿಧಾನಸಭಾ ಚುನಾವಣೆಯ ಮೇಲೆ ದೇಶವೇ ಗಮನ ಇರಿಸಿದೆ ಎಂದರು.

ರಾಜ್ಯದಲ್ಲಿ ಕಳೆದ ಐದು ವರ್ಷಗಳ ಸಿದ್ಧರಾಮಯ್ಯ ನೇತೃತ್ವದ ಸರಕಾರದ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಸೂಚ್ಯಂಕದಲ್ಲಿ ಏರಿಕೆಯಾಗಿದೆ. ಜನರ ಜೀವನ ಮಟ್ಟದಲ್ಲಿಯೂ ಸುಧಾರಣೆಯಾಗಿದೆ. ನಿರುದ್ಯೋಗ ಸಮಸ್ಯೆ ದೇಶದ ಇತರ ರಾಜ್ಯಗಳಿಂತ ಶೇಕಾಡವಾರು ಕಡಿಮೆ ಇದೆ. ಇದು ಅಭಿವೃದ್ಧಿಯ ಸಂಕೇತ ಎಂದು ಅವರು ಹೇಳಿದು.

ಇಡೀ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಶೇ. 5.9ರಷ್ಟಿದ್ದು, ಕರ್ನಾಟಕದಲ್ಲಿ ಇದು ಶೇ. 2.6 ಆಗಿದೆ. ಇದೇ ವೇಳೆ ಗುಜರಾತ್‌ನಲ್ಲಿ ಶೇ. 5ರಷ್ಟು ನಿರುದ್ಯೋಗ ಸಮಸ್ಯೆ ಇದೆ ಎಂದು ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು, ಅಂಕಿಅಂಶಗಳೊಂದಿಗೆ ರಾಜ್ಯದ ಅಭಿವೃದ್ಧಿಯ ಸೂಚ್ಯಾಂಕವನ್ನು ತಿಳಿಸಿದರು.

ದೇವರಾಜ ಅರಸು ಅವರ ಬಳಿಕ ಕರ್ನಾಟಕದಲ್ಲಿ ಐದು ವರ್ಷಗಳ ಸ್ಥಿರ ಸರಕಾರವನ್ನು ನೀಡಿದ ಹೆಗ್ಗಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು. 2008ರಿಂದ 2013ರವರೆಗೆ ರಾಜ್ಯದ ಜನತೆ ಬಿಜೆಪಿಗೆ ಅಧಿಕಾರಕ್ಕೆ ಅವಕಾಶ ನೀಡಿದ್ದರು. ಈ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳು ಸರಕಾರ ನಡೆಸಿದ್ದು, ಕೆಟ್ಟ ಆಡಳಿತ ಅದಾಗಿತ್ತು. ಈ ಅವಧಿಯಲ್ಲಿ ಸಾಧನೆಗಿಂತಲೂ ಭ್ರಷ್ಟಾಚಾರವೇ ಅಧಿಕವಾಗಿತ್ತು. ಹಾಗಾಗಿಯೇ ಪ್ರಸ್ತುತ ಬಿಜೆಪಿಗೆ ತಮ್ಮ ಅವಧಿಯಲ್ಲಿ ನಡೆದಿರುವ ಸಾಧನೆಗಳ ಬಗ್ಗೆ ಏನೂ ಹೇಳಿಕೊಳ್ಳಲು ಸಾಧ್ಯವಾಗದೆ ಇದೀಗ ಕಳೆದ ಐದು ವರ್ಷಗಳ ಸಾಧನೆಯಿಂದ ಕಂಗಾಲಾಗಿ ಸಿದ್ದರಾಮಯ್ಯನವರ ಆಡಳಿತದ ನ್ಯೂನ್ಯತೆಗಳನ್ನೇ ಹುಡುಕುವುದರಲ್ಲಿ ಬಿಜೆಪಿ ಕಾಲ ಕಳೆಯುತ್ತಿದೆ ಎಂದು ಪಿ. ಚಿದಂಬರಂ ಆರೋಪಿಸಿದರು.

ಆರೆಸ್ಸೆಸ್, ಬಿಜೆಪಿಯ ಒಡೆದಾಳುವ ನೀತಿಗೆ ರಾಜ್ಯದಲ್ಲಿ ಅವಕಾಶ ಸಿಗದು 

ಹಿಂದೂ ರಾಷ್ಟ್ರ ಸ್ಥಾಪನೆಯ ಅಜೆಂಡಾದೊಂದಿಗೆ ಒಡೆದಾಳುವ ಮೂಲಕ ಏಕ ಸಂಸ್ಕೃತಿಯನ್ನು ಪ್ರತಿಪಾದಿಸಲು ಹವಣಿಸುತ್ತಿರುವ ಆರೆಸ್ಸೆಸ್ ಮತ್ತು ಬಿಜೆಪಿ ತಂತ್ರಕ್ಕೆ ಕರ್ನಾಟಕದ ಮತದಾರರು ಬಲಿಯಾಗುವುದಿಲ್ಲ. ಮಂಗಳೂರಿನಲ್ಲಿಯೂ ಇಂತಹ ಕುತಂತ್ರಗಳಿಗೆ ಪ್ರಯತ್ನಿಸಲಾಗುತ್ತಿದೆ. ಆದರೆ ಬಹುಸಂಸ್ಕೃತಿ, ಬಹುಧರ್ಮಗಳ ನಾಡಿನಲ್ಲಿ ಇದಕ್ಕೆ ಮತದಾರರು ಅವಕಾಶ ನೀಡುವುದಿಲ್ಲ. ಹಾಗಾಗಿ ಮತದಾರರು ಕಾಂಗ್ರೆಸ್ ಪಕ್ಷದ ಬಗ್ಗೆ ಒಲವಿರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ದಿ ಕಾರ್ಯಗಳ ಬಗ್ಗೆ ವಿಶ್ವಾಸವಿರಿಸಿ ಮತ ಚಲಾಯಿಸಬೇಕು ಎಂದು ಅವರು ಹೇಳಿದರು.

ಕರ್ನಾಟಕದ ಕಳೆದ ಐದು ವರ್ಷಗಳ ಆಡಳಿತವನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಭ್ರಷ್ಟ ಆಡಳಿತ ಎಂದು ಹೇಳುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಿದಂಬರಂ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಹೋದಲ್ಲೆಲ್ಲಾ ಇದನ್ನೇ ಹೇಳುತ್ತಾರೆ. ತ್ರಿಪುರಾ, ಪಂಜಾಬ್ ಹೀಗೆ. ಇದು ಅವರ ಪ್ರಚಾರ ತಂತ್ರ. ಅಭಿವೃದ್ಧಿ ಬಗ್ಗೆ ಮಾತನಾಡುವುದಾದರೆ 2008ರಿಂದ 2013ರವರೆಗಿನ ರಾಜ್ಯದ ಅಭಿವೃದ್ದಿ ಬಗ್ಗೆ ಯಾಕೆ ಅವರು ಮಾತನಾಡುತ್ತಿಲ್ಲ. ಮಾತನಾಡಲು ವಿಷಯವೇ ಇಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನು ಮೋದಿ ನಿರ್ಧರಿಸಬೇಕಿಲ್ಲ !

ದೇಶದಲ್ಲಿ ಮುಂದೆ ಕಾಂಗ್ರೆಸ್ ಆಡಳಿತಕ್ಕೆ ಬಂದಾಗ ಪ್ರಧಾನಿ ಯಾರೆಂಬುದನ್ನು ನಿರ್ಧರಿಸುವುದು ಪಕ್ಷಕ್ಕೆ ಬಿಟ್ಟ ವಿಚಾರ. ಅದನ್ನು ಪ್ರಧಾನಿ ಮೋದಿಯವರು ಹೇಳಬೇಕಾಗಿಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ನಾನು ಪ್ರಧಾನಿ ಆಗಬಹುದು ಎಂಬ ಮಾತನ್ನು ರಾಹುಲ್ ಗಾಂಧಿಯವರು ಹೇಳಿದ್ದು. ಆದರೆ ಬಿಜೆಪಿಯು ಪಕ್ಷದಲ್ಲಿ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಗಡ್ಕರಿಯಂತಹ ಹಿರಿಯರನ್ನು ಬದಿಗೊತ್ತಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದು ಹೇಗೆ ಎಂಬುದನ್ನು ಹೇಳಬೇಕು. ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭ ಬಿಜೆಪಿಯ ಹಿರಿಯರಾದ ರಾಜನಾಥ್ ಸಿಂಗ್‌ರವರು ‘ಅಬ್‌ಕಿ ಬಾರಿ ಬಿಜೆಪಿ ಸರಕಾರ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದರು. ಒಂದು ಗಂಟೆಯೊಳಗೆ ಆ ಪ್ರತಿಕ್ರಿಯೆಯ ಬದಲಿಗೆ ಅಬ್ ಕಿ ಬಾರಿ ಮೋದಿ ಸರಕಾರ್ ಎಂಬುದಾಗಿ ಪ್ರತಿಕ್ರಿಯಿಸಲಾಗಿತ್ತು. ನಾವೇನೂ ರಾಹುಲ್ ಸರಕಾರ ಎಂದು ಹೇಳಿಕೊಳ್ಳುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಚಿದಂಬರಂ ಉತ್ತರಿಸಿದರು.

ರಾಜ್ಯದ ಪೊಲೀಸ್ ವ್ಯವಸ್ಥೆ ಕೇಸರೀಕರಣಗೊಳ್ಳುತ್ತಿದೆ ಎಂಬ ಆರೋಪದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ, ರಕ್ಷಣಾ ವ್ಯವಸ್ಥೆಗೆ ರಾಜಕೀಯ ನುಸುಳಬಾರದು. ಅಂತಹ ಪ್ರಯತ್ನಗಳು ನಡೆಯುತ್ತಿವೆ ಎಂದಾದರೆ ಸಂಬಂಧಪಟ್ಟ ರಾಜ್ಯ ಸರಕಾರಗಳು ಆ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ರಕ್ಷಣೆಗಾಗಿ ಸಮವಸ್ತ್ರದಲ್ಲಿರುವವರು ಯವತ್ತೂ ರಾಜಕೀಯವಾಗಿ ತಟಸ್ಥರಾಗಿದ್ದುಕೊಂಡು ತಮ್ಮ ಸೇವೆಯನ್ನು ನಿರ್ವಹಿಸಬೇಕು ಎಂದರು.

ಅಭಿವೃದ್ಧಿಶೀಲ ರಾಷ್ಟ್ರ, ರಾಜ್ಯಗಳಲ್ಲಿ ಸಾಮಾಜಿಕ ಕ್ಷೇತ್ರದ ವೆಚ್ಚಗಳು ಅತ್ಯಗತ್ಯ. ಇಂತಹ ನಿಟ್ಟಿನಲ್ಲಿ ಅನ್ನಭಾಗ್ಯ, ಶಾಲಾ ಬಾಲಕಿಯರಿಗೆ ಸೈಕಲ್ ವಿತರಣೆಯಂತಹ ಕಾರ್ಯಕ್ರಮಗಳು ಉತ್ತಮ ಬೆಳವಣಿಗೆ ಎಂದು ವಿಶ್ಲೇಷಿಸಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಇಳಿಕೆಯಾಗಿದ್ದರೂ ಎಕ್ಸಾಸ್ ಡ್ಯೂಟಿ ಹೆಚ್ಚಳದ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿ ಜನರನ್ನು ಲೂಟಿ ಮಾಡಲಾಗುತ್ತಿದೆ ಎಂದರು.

ಏಕರೂಪದ ತೆರಿಗೆಯನ್ನು ಹಿಂದಿನ ಯುಪಿಎ ಸರಕಾರ ಜಾರಿಗೆ ತರಲು ಮುಂದಾಗಿತ್ತು. ಆಗ ಇದೇ ಬಿಜೆಪಿಯವರು ಅದನ್ನು ತಡೆದಿದ್ದರು. ಇದೀಗ ಜಾರಿಗೆ ಬಂದಿರುವ ಜಿಎಸ್‌ಟಿ ಅವೈಜ್ಞಾನಿಕವಾಗಿದ್ದು, ಗಬ್ಬರ್‌ಸಿಂಗ್‌ಕಿ ಟ್ಯಾಕ್ಸ್ ಎಂದವರು ಲೇವಡಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಒಟ್ಟಾರೆಯಾಗಿ ಮಾತನಾಡುತ್ತಾರೆ ಎಂದು ಟೀಕಿಸಿದ ಚಿದಂಬರಂ, ಅವರು ಜನರಲ್ ಕರಿಯಪ್ಪ ಮತ್ತು ತಿಮ್ಮಯ್ಯ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ಪ್ರಧಾನಿ ಸ್ಥಾನದಲ್ಲಿರುವವರು ಇತಿಹಾಸವನ್ನೇ ಸುಳ್ಳಾಗಿ ಚಿತ್ರಿಸುವುದನ್ನು ಒಪ್ಪಿಕೊಳ್ಳಲಾಗದು ಎಂದವರು ಹೇಳಿದರು.

ಗೋಷ್ಠಿಯಲ್ಲಿ ಎಐಸಿಸಿ ವಕ್ತಾರ ಜೈವೀರ್ ಶೆರ್ಗಿಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಸದಾಶಿವ ಉಳ್ಳಾಲ್, ಇಬ್ರಾಹೀಂ ಕೋಡಿಜಾಲ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News