ದ.ಕ.ಜಿಲ್ಲೆಯ 8 ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಗೆಲುವು: ಪೂಜಾರಿ
ಮಂಗಳೂರು, ಮೇ 9: ದ.ಕ. ಜಿಲ್ಲೆಯ 8 ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದರು.
ನಗರದ ಕದ್ರಿಯಲ್ಲಿರುವ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 7 ಸ್ಥಾನಗಳನ್ನು ಗೆದ್ದಿದ್ದರೆ ಈ ಬಾರಿ 8 ಸ್ಥಾನವನ್ನೂ ಗೆಲ್ಲಲಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಲಿದ್ದಾರೆ ಎಂದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಜೆ.ಆರ್.ಲೋಬೊ ವಿರುದ್ಧ ತೀವ್ರ ಅಪಪ್ರಚಾರ ಮಾಡಲಾಗುತ್ತಿದೆ. ಇದು ಖಂಡನೀಯ. ಶಾಸಕ ಜೆ.ಆರ್. ಲೋಬೊ ಜಾತಿವಾದಿಯಲ್ಲ. ಕಾಂಗ್ರೆಸ್ ಪಕ್ಷ ಕೂಡ ಒಂದು ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಜಾತ್ಯತೀತ ತತ್ವದ ಮೇಲೆ ಕಾರ್ಯಾಚರಿಸುವ ಕಾಂಗ್ರೆಸ್ ಎಲ್ಲಾ ಧರ್ಮೀಯರನ್ನೂ ಕೂಡ ಗೌರವಿಸುತ್ತದೆ. ಜೆ.ಆರ್.ಲೋಬೊ ಕೂಡ ಎಲ್ಲರನ್ನೂ ಪ್ರೀತಿಸುತ್ತಾರೆ. ಅವರು ಬಂಟ ವಿರೋಧಿ, ಬಿಲ್ಲವ ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ ಎಂದರು.
ಲೋಬೊ ಯಾವತ್ತೂ ಜಾತಿವಾದಿಯಾಗಿರಲಿಲ್ಲ. ಜಾತ್ಯತೀತರಾದ ಅವರ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ. ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕಿದೆ ಎಂದ ಪೂಜಾರಿ, ಒಂದು ವೇಳೆ ಲೊಬೊ ಜಾತಿವಾದಿಯಾದರೆ ನಾನೇ ಅವರನ್ನು ಸೋಲಿಸ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜೆ.ಆರ್.ಲೋಬೊ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಯು.ಬಿ.ವೆಂಕಟೇಶ್, ಮೇಯರ್ ಭಾಸ್ಕರ ಮೊಯ್ಲಿ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಲ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪಕ್ಷದ ಮುಖಂಡರಾದ ಮುಹಮ್ಮದ್ ಮಸೂದ್, ಕಳ್ಳಿಗೆ ತಾರನಾಥ ಶೆಟ್ಟಿ, ಮುಹಮ್ಮದ್ ಸಲೀಂ, ವಿಜಯ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.