ಮತದಾನ ಪ್ರಕ್ರಿಯೆಗೆ ಜಿಲ್ಲಾ ಪೊಲೀಸ್ ಸಕಲ ಸಿದ್ಧತೆ: ಎಸ್ಪಿ ರವಿಕಾಂತೇಗೌಡ
ಮಂಗಳೂರು, ಮೇ 9: ಮತದಾನ ಪ್ರಕ್ರಿಯೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಸಕಲ ಸಿದ್ಧತೆ ಮಾಡಿಕೊಂಡಿವೆ ಎಂದು ಎಸ್ಪಿ ರವಿಕಾಂತೇಗೌಡ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಜ.17ರಿಂದಲೇ ಚುನಾವಣೆಗೆ ಸಂಬಂಧಿಸಿ ಸಿದ್ಧತೆ ಆರಂಭಿಸಲಾಗಿದ್ದು, ನೀತಿ ಸಂಹಿತೆ ಜಾರಿಗೆ ಬಂದ ನಂತರ ಇಲಾಖೆಯು ಎಚ್ಚೆತ್ತುಕೊಂಡು ಸರ್ವ ಸಿದ್ದತೆ ನಡೆಸಿದೆ. ಜಿಲ್ಲಾ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ 981 ಮತಗಟ್ಟೆಗಳಿವೆ. ಬಂದೋಬಸ್ತ್‌ಗಾಗಿ ಡಿವೈಎಸ್ಪಿ ಹುದ್ದೆಯ ಅಧಿಕಾರಿಗಳಲ್ಲದೆ 870 ಹೆಡ್‌ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಕಾನ್‌ಸ್ಟೇಬಲ್‌ಗಳು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಲ್ಲದೆ 330 ಗೃಹರಕ್ಷಕ ದಳದ ಸಿಬ್ಬಂದಿ, 20 ಅರಣ್ಯ ರಕ್ಷಣಾ ಸಿಬ್ಬಂದಿ, 1400 ಅರೆ ಸೇನಾ ಪಡೆ ಸಹಿತ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಬಂದೋಬಸ್ತ್ ನಡೆಸುತ್ತಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 64 ಮತಗಟ್ಟೆಗಳಿದ್ದು, ಅಲ್ಲಿ ಅರೆಸೇನಾ ಪಡೆ ಬಳಸಲಾಗುತ್ತದೆ. ನಕ್ಸಲ್ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಯೊಂದಿಗೆ 2 ಬಾರಿ ತೆರಳಿ ಅಲ್ಲಿನ ಮತದಾರರೊಂದಿಗೆ ಮಾತುಕತೆ ನಡೆಸಿದ್ದು, ಅವರೆಲ್ಲಾ ನಿರ್ಭೀತಿಯಿಂದ ಮತ ಚಲಾಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ರವಿಕಾಂತೇಗೌಡ ಹೇಳಿದರು.
ಜಿಲ್ಲೆಯ ಸಮಾಜಘಾತುಕ ಶಕ್ತಿಗಳ, ಮತೀಯ ಗೂಂಡಾಗಳ, ರೌಡಿಗಳ ಮೇಲೆ ಕಣ್ಗಾವಲಿಡಲಾಗಿದೆ. ಮುಂಜಾಗರೂಕತಾ ಕ್ರಮವಾಗಿ 900ಕ್ಕೂ ಅಧಿಕ ಮಂದಿಯಿಂದ ಜಾಮೀನು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಕಂದಾಯ ಇಲಾಖಾಧಿಕಾರಿಗಳ ಜೊತೆಗೂಡಿ ಕಾರ್ಯಾಚರಣೆ ನಡೆಸಲಾಗಿದೆ. ದ.ಕ. ಜಿಲ್ಲಾಧಿಕಾರಿ ಸಹಿತ ಕಾಸರಗೋಡು ಎಸ್ಪಿಹಾಗೂ ಜಿಲ್ಲಾಧಿಕಾರಿಯ ಜೊತೆಯೂ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದರು.
8 ಅಂತಾರಾಜ್ಯ ಸಹಿತ 23 ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ಇಲ್ಲಿ ಶೇ. 40ರಷ್ಟು ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮತ್ತು ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಚುನಾವಣೆಗೆ ಸಂಬಂಧಿಸಿ ನಾಲ್ಕು ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಆ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ. ಒಂದು ಪ್ರಕರಣದ ಆರೋಪಿಯ ಸುಳಿವು ಸಿಕ್ಕಿಲ್ಲ. ಹಿಂಸೆಗೆ ಪ್ರಚೋದಿಸುವ ಇಬ್ಬರನ್ನು ಗಡಿಪಾರಿಗಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು, ಆ ಪೈಕಿ ಓರ್ವನ ಗಡಿಪಾರಿಗೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ್ದಾರೆ ಎಂದರು.
ಸೂಕ್ತ ದಾಖಲೆಗಳಿಲ್ಲದ ಅಕ್ರಮ ಸಾಗಾಟ ಮಾಡುತ್ತಿದ್ದ 4 ಲಕ್ಷ ರೂ. ಮತ್ತು 6.85 ಕೆ.ಜಿ ಗಾಂಜಾ ಹಾಗೂ 54.80 ಲೀ. ಅಕ್ರಮ ಮದ್ಯವನ್ನು ವಶಪಡಿ ಸಲಾಗಿದೆ. ಮತದಾರರ ಮೇಲೆ ಆಮಿಷ ಒಡ್ಡಲು ದಾಸ್ತಾನಿರಿಸಿದ್ದ 1,222 ಸೀರೆಗಳನ್ನು ವಶಪಡಿಸಲಾಗಿದೆ. ಪರವಾನಿಗೆಯುಳ್ಳ 9,880 ಬಂದೂಕುಗಳನ್ನು ಠೇವಣಿ ಇಡಲಾಗಿದ್ದು, ರೈತರ ಮನವಿ ಮೇರೆಗೆ 57 ಬಂದೂಕುಗಳ ಬಳಕೆಗೆ ವಿನಾಯಿತಿ ನೀಡಲಾಗಿದೆ ಎಂದು ರವಿಕಾಂತೇಗೌಡ ಹೇಳಿದರು.