ಕ್ಷೇತ್ರದ ಎಲ್ಲ ವರ್ಗದವರ ಅಭಿವೃದ್ಧಿಗೆ ಯು.ಟಿ.ಖಾದರ್ ಶ್ರಮಿಸಿದ್ದಾರೆ: ಉಮರ್ ಫಾರೂಕ್
ಬಂಟ್ವಾಳ, ಮೇ 9: ಯು.ಟಿ.ಖಾದರ್ ಅವರು ಕ್ಷೇತ್ರದ ಎಲ್ಲ ವರ್ಗದವರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದು, ಈ ಬಾರಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಕೆಪಿಸಿಸಿ ಪ್ರಚಾರ ಸಮಿತಿಯ ಉಸ್ತುವಾರಿ ವೀಕ್ಷಕ ಉಮರ್ ಫಾರೂಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಸುಮಾರು 900 ಕೋಟಿಗೂ ಅಧಿಕ ಅನುದಾನವನ್ನು ಕ್ಷೇತ್ರದ ವಿವಿಧ ಯೋಜನೆಗಳಿಗೆ ವಿನಿಯೋಗಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಕ್ರಿಟ್ ರಸ್ತೆ, ಸಂಪರ್ಕ ರಸ್ತೆ, ಕುಡಿಯುವ ನೀರು, ಮನೆಗಳಿಗೆ ಹಕ್ಕುಪತ್ರ ವಿತರಣೆ, ಅಡ್ಯಾರ್ ಕಿಂಡಿ ಅಣೆಕಟ್ಟಿಗೆ 176 ಕೋಟಿ ರೂ. ಅನುದಾನ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ, ಸಮುದಾಯ ಭವನಗಳು, ಪ್ರವಾಸಿ-ಯಾತ್ರಾ ನಿವಾಸ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಡಿತರ ಚೀಟಿ ಸೇರಿದಂತೆ ಜನರ ಮೂಲಭೂತ ಸೌಲಭ್ಯಗಳ ವಿಸ್ತರಣೆಗೆ ಪ್ರಾಮಾಣಿಕವಾದ ಪ್ರಯತ್ನ ಮಾಡಿದ್ದಾರೆ. ಇದರ ಅಭಿವೃದ್ಧಿ ಜನರ ಕಣ್ಣ ಮುಂದೆ ಕಾಣುತ್ತಿದ್ದು, ವಿರೋಧಿಗಳು ಇವರ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ, ಕ್ಷೇತ್ರದ ಮತದಾರರು ಜಾತಿ ಮತ ಬೇಧವಿಲ್ಲದೆ ಖಾದರ್ ಅವರ ಕೈ ಹಿಡಿಯಲಿದ್ದಾರೆ ಎಂದು ಹೇಳಿದರು.
ನೂರಕ್ಕೆ ನೂರು ರಾಜ್ಯ ಸರಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿದ್ದು, ಯೋಜನೆಗಳನ್ನು ಕ್ಷೇತ್ರದ ಫಲಾನುಭವಿಗಳಿಗೆ ದೊರಕಿಸಿಕೊಡು ವಲ್ಲಿ ಸಚಿವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಅಲ್ಲದೆ, ಖಾದರ್ ಅವರು ಜನರೊಂದಿಗೆ ಉತ್ತಮ ಒಡನಾಟವನ್ನಿಟ್ಟುಕೊಂಡಿದ್ದು, ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಗುಣ ಅವರದು ಎಂದವರು, ಆರೋಗ್ಯ ಮತ್ತು ಆಹಾರ ಖಾತೆಯುಲ್ಲಿ ಅತ್ಯುತ್ತಮ ಯೋಜನೆಗಳನ್ನು ಜಾರಿಗೊಳಿಸಿ ದೇಶ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧರಾಗಿದ್ದಾರೆ. ಅಲ್ಲದೆ, ಪ್ರಚಾರದ ವೇಳೆ ಬೂತ್ ಮಟ್ಟದಲ್ಲಿ ಜನರಿಂದ ಉತ್ತಮ ಬೆಂಬಲ ಸಿಕ್ಕಿವೆ ಎಂದು ತಿಳಿಸಿದರು.
ಪಕ್ಷವು ತನ್ನನ್ನು ಹಾಗೂ ಕೆಪಿಸಿಸಿ ಮಹಿಳಾ ಘಟಕದ ವಕ್ತಾರೆ ಲಾವಣ್ಯ ಬಳ್ಳಾಲ್ ಅವರನ್ನು ಜಿಲ್ಲಾ ಚುನಾವಣಾ ಪ್ರಚಾರದ ವೀಕ್ಷಕರಾಗಿ ನೇಮಕ ಮಾಡಿದ್ದು, ಜಿಲ್ಲೆಯಾದ್ಯಂತ ಸಂಚಾರಿಸಿ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದ್ದು, 8 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.