ಭಟ್ಕಳ: ಕಾಂಗ್ರೆಸ್ ವಿರುದ್ಧ ಸುಳ್ಳಾರೋಪ; ದೇವರ ಮೊರೆಹೊದ ಮಾಂಕಾಳ ವೈದ್ಯ
ಭಟ್ಕಳ, ಮೇ 9: ಜಾತಿ, ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಬಿಜೆಪಿಗರು ಕಾಂಗ್ರೆಸ್ ಅಭ್ಯರ್ಥಿ ಮಾಂಕಾಳ್ ವೈದ್ಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳಾರೋಪ ಮತ್ತು ತೇಜೋವಧೆ ಮಾಡುತ್ತಿರುವವ ವಿರುದ್ಧ ಕಾನೂನು ಹೋರಾಟ ಸೇರಿದಂತೆ ದೇವರ ಮನೆಯ ಬಾಗಿಲು ತಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಚುನಾವಣೆಯಲ್ಲಿ ಸುಳ್ಳು ಹೇಳುವುದು ಸಾಮಾನ್ಯ ಆದರೂ ಕೂಡಾ ಸುಳ್ಳುಗಳನ್ನೇ ಪ್ರಚಾರಕ್ಕೆ ಬಳಸುತ್ತಿರುವುದು ಖಂಡನೀಯವಾಗಿದ್ದು ಈ ನೆಲದ ಕಾನೂನಿನಂತೆ ಈ ಕುರಿತು ದೂರು ದಾಖಲಿಸಿದ್ದೇನೆ. ನಾನೋರ್ವ ಹಿಂದೂ ಧರ್ಮದವನಾಗಿದ್ದು ದೇವರಲ್ಲಿ ಅಪಾರ ನಂಬಿಕೆನ್ನಿಟ್ಟು ಬಂದಿದ್ದೇನೆ. ನನ್ನ ನಂಬಿಕೆಯಂತೆ ದೇವರಲ್ಲಿಯೂ ಕೂಡಾ ಇಂತಹ ಸುಳ್ಳು ಪ್ರಚಾರ ಮಾಡುವವರಿಗೆ ಸರಿಯದ ಶಿಕ್ಷೆ ಕೊಡುವಂತೆ ಬೇಡಿಕೊಂಡಿದ್ದೇನೆ ಎಂದು ಶಾಸಕ ಮಂಕಾಳ ವೈದ್ಯ ತಿಳಿಸಿದ್ದು, ಸಾಮಾಜಿಕ ಜಾಲ ತಾಣದಲ್ಲಿ ನೀಲಗೋಡ ಯಕ್ಷೇಶ್ವರಿ ದೇವರಲ್ಲಿ ಸುಳ್ಳು ಪ್ರಚಾರಕರ ವಿರುದ್ಧ ದೂರು ನೀಡಿದ ಶಾಸಕರು ಪತ್ರಕರ್ತರೊಂದಿಗೆ ಈ ಬಗ್ಗೆ ಮಾಹಿತಿ ನೀಡಿದರು.
ಕಳೆದ ಹಲವಾರು ದಿನಗಳಿಂದ ಬೇರೆ ಬೇರೆ ಸುದ್ದಿಗಳನ್ನು ಹರಿಯ ಬಿಟ್ಟು ಮತದಾರರನ್ನು ಸೆಳೆಯಲು ಮಾಡಿದ ಪ್ರಯತ್ನ ಫಲ ನೀಡದೇ ಇದ್ದಾಗ ಹೈಟೆಕ್ ಖಸಾಯಿಖಾನೆ ಮಾಡಲು ಒಪ್ಪಂದ ಆಗಿದೆ ಎನ್ನುವ ಹಸೀ ಸುಳ್ಳು ಸುದ್ದಿಯನ್ನು ಹರಿ ಬಿಡಲಾಯಿತು. ಈ ಬಗ್ಗೆ ಈಗಾಗಲೇ ಪೊಲೀಸ್ ದೂರು ದಾಖಲಿಸಿ ದ್ದೇನೆ. ಅದು ಈ ನೆಲದ ಕಾನೂನು ನಂಬಿ ದೂರು ದಾಖಲಿಸಿದ್ದೇನೆ. ಅದೇ ರೀತಿಯಾಗಿ ನಾನು ನಂಬಿದ ಧರ್ಮದ ಅನುಸಾರವಾಗಿ ದೇವಿಯಲ್ಲಿ ದೂರು ನೀಡಿದ್ದೇನೆ. ನನ್ನದು ತಪ್ಪಿದ್ದರೆ ನನಗೆ ದೇವರು ಶಿಕ್ಷೆ ಕೊಡಲಿ ಇಲ್ಲವಾದಲ್ಲಿ ಸುಳ್ಳು ಪ್ರಚಾರ ಮಾಡಿದವರು ಶಿಕ್ಷೆ ಅನುಭವಿಸಲಿ ಎಂದೂ ಹೇಳಿದರು.
ತಾಲೂಕಿನಾದ್ಯಂತ ಚುನಾವಣಾ ಸಂಬಂಧ ರಾಜಕೀಯ ಪಕ್ಷಗಳು, ನಾಯಕರು ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ನಡೆಸುವುದು ಸರ್ವೆ ಸಾಮಾನ್ಯ. ಆದರೆ ಇಂತಹ ಕೀಳು ಮಟ್ಟದ, ಒಂದು ಧರ್ಮದವರನ್ನು ಎತ್ತಿಕಟ್ಟುವ ಕೆಲಸ ಮಾತ್ರ ಖಂಡನೀಯವಾಗಿದ್ದು ಶಾಸಕರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಭಟ್ಕಳದಲ್ಲಿ ಅಧೀಕೃತವಾಗಿ ಹೈಟೆಕ್ ಖಸಾಯಿಖಾನೆ ಮಾಡುತ್ತಾರೆನ್ನುವ ಗುಲ್ಲೆಬ್ಬಿಸಿದ್ದೇ ಅಲ್ಲದೇ ಹಿಂದೂಗಳ ಪ್ರದೇಶದಲ್ಲಿ ಒಳಚರಂಡಿ ಯೋಜನೆ ತರುತ್ತಾರೆನ್ನುವ ಇನ್ನೊಂದು ಸುಳ್ಳನ್ನು ಹರಿಯ ಬಿಡುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಹಾಲಿ ಶಾಸಕ ಮಂಕಾಳ ವೈದ್ಯ ಅಪ ಪ್ರಚಾರದ ವಿರುದ್ಧ ತಿರುಗಿ ಬಿದ್ದಿದ್ದು ತಮ್ಮ ಪ್ರಾಮಾಣಿಕವಾದ ಕೆಲವನ್ನು ಜನರ ಮುಂದಿಡುತ್ತಿದ್ದಾರೆ.
ಈ ರೀತಿಯಲ್ಲಿ ಒಂದು ಕೋಮಿನವರ ಭಾವನೆಗಳೊಂದಿಗೆ ಚೆಲ್ಲಾಟ ಆಡಿ ಚುನಾವಣೆಯಲ್ಲಿ ಮತಗಳಿಸುವ ತಂತ್ರವಾಗಿದ್ದು ಇದರಿಂದ ಭಟ್ಕಳದಲ್ಲಿ ಇಲ್ಲಿಯ ತನಕ ಕೋಮು ಸಾಮರಸ್ಯ ಕಾಪಾಡಿಕೊಂಡು ಬರಲಾಗಿದ್ದು ಇದಕ್ಕೆ ಧಕ್ಕೆ ತರಲು ಯಾರಿಂದಲೂ ಸಾಧ್ಯವಿಲ್ಲ. ನಾನೋರ್ವ ಹಿಂದೂವಾಗಿದ್ದು ಎಂದೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲಿಲ್ಲ, ಅನೇಕ ದೇವಸ್ಥಾನಗಳಿಗೆ ನಾನು ಜೀರ್ಣೋದ್ಧಾರಕ್ಕೆ ಸಹಾಯ ಮಾಡಿದ್ದು ಧರ್ಮದ ಹೆಸರಿನಲ್ಲಿ ತಪ್ಪು ಸಂದೇಶ ನೀಡುವುದು ಸರಿಯಲ್ಲ. ಖಸಾಯಿ ಖಾನೆಯನ್ನು ಕೇಂದ್ರ ಸರಕಾರವೇ ಮಂಜೂರು ಮಾಡಬೇಕಾಗಿದ್ದು ಜನ ಇದನ್ನು ತಿಳಿದು ಕೊಂಡು ಪೊಳ್ಳು ಪ್ರಚಾರಕ್ಕೆ ಬಗ್ಗುವುದಿಲ್ಲ ಎನ್ನುವ ನಂಬಿಕೆ ಇದೆ ಎಂದು ಅವರು ಹೇಳಿದರು.