ತ್ರಾಸಿ: ಆದಿತ್ಯನಾಥ್ ಕಾರ್ಯಕ್ರಮದಲ್ಲಿ ಆಯೋಗದ ವೀಡಿಯೊ ಚಿತ್ರೀಕರಣಕ್ಕೆ ಅಡ್ಡಿ
ಗಂಗೊಳ್ಳಿ, ಮೇ 9: ತ್ರಾಸಿಯಲ್ಲಿ ಮಂಗಳವಾರ ನಡೆದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಚುನಾವಣಾ ಪ್ರಚಾರದ ಸಭಾ ಕಾರ್ಯಕ್ರಮ ದಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣಾ ಆಯೋಗದ ಪರವಾಗಿ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ವರದಿಯಾಗಿದೆ.
ಚುನಾವಣಾ ಆಯೋಗದ ವೀಡಿಯೊಗ್ರಾಫರ್ ಆಗಿದ್ದ ಪ್ರಸಾದ್ ಎಂಬವರು ಮಧ್ಯಾಹ್ನ 12:45 ಗಂಟೆಗೆ ತ್ರಾಸಿಯ ಆದಿತ್ಯನಾಥ್ ಕಾರ್ಯಕ್ರಮದಲ್ಲಿ ವೇದಿಕೆಯ ಬಳಿ ವೀಡಿಯೊ ಚಿತ್ರೀಕರಣ ಮಾಡಲು ತೆರೆಳಿದ್ದು, ಈ ಸಂದರ್ಭ ವೇದಿಕೆಯ ಮೇಲಿದ್ದ ಕಾರ್ಯಕರ್ತರು ಪ್ರಸಾದ್ ವೀಡಿಯೊ ಚಿತ್ರೀಕರಣ ಮಾಡುವುದನ್ನು ತಡೆ ಹಿಡಿದರೆನ್ನಲಾಗಿದೆ. ಅಲ್ಲದೆ ಪ್ರಸಾದ್ ರನ್ನು ಎಳೆದಾಡಿದ ಕಾರ್ಯಕರ್ತರು ವೀಡಿಯೊ ಕ್ಯಾಮರಾವನ್ನು ಬಲವಂತವಾಗಿ ಕಿತ್ತುಕೊಂಡು ಅದರಲ್ಲಿ ಸೆರೆ ಹಿಡಿದ ಎಲ್ಲಾ ವೀಡಿಯೊವನ್ನು ಡಿಲೀಟ್ ಮಾಡಿ ಕ್ಯಾಮರಾವನ್ನು ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿ. ಈ ಮೂಲಕ ಅವರು ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಪ್ರಸಾದ್ ಬೈಂದೂರು ಕ್ಷೇತ್ರದ ಅಧಿಕಾರಿ ಪಿ.ಶ್ರೀನಿವಾಸ ಅವರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.