ಉಡುಪಿ ನಗರದಲ್ಲಿ ಪ್ರಮೋದ್ ಮಧ್ವರಾಜ್ ಪಾದಯಾತ್ರೆ
ಉಡುಪಿ, ಮೇ 9: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಇಂದು ಉಡುಪಿ ನಗರದಲ್ಲಿ ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಲಾಯಿತು.
ನಗರದ ಜೋಡುಕಟ್ಟೆಯಿಂದ ಪ್ರಾರಂಭಗೊಂಡ ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಲ್ಲಿಂದ ಕೆ.ಎಂ.ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಕಲ್ಸಂಕದ ಮೂಲಕ ಕಡಿಯಾಳಿ, ಕುಂಜಿಬೆಟ್ಟುವಿನಲ್ಲಿ ಪಾದಯಾತ್ರೆ ಮುಕ್ತಾಯಗೊಂಡಿತು.
ಕುಂಜಿಬೆಟ್ಟುವಿನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಮೋದ್ ಮಧ್ವರಾಜ್, ಸರ್ವೆಯ ಪ್ರಕಾರ ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ.70ರಷ್ಟು ಮತ ಪಡೆಯಲಿದೆ. ಅದನ್ನು ಶೇ. 80ಕ್ಕೆ ಏರಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ. ಮನೆಮನೆಗೆ ತೆರಳಿ ಕಾಂಗ್ರೆಸ್ ಪರ ಮತ ಹಾಕುವವರನ್ನು ಕರೆದುಕೊಂಡು ಬರಬೇಕು. ಇನ್ನು ಮೂರು ದಿನ ನನಗಾಗಿ ಕೆಲಸ ಮಾಡಿದರೆ ಮುಂದೆ ಐದು ವರ್ಷ ನಿಮಗಾಗಿ ಬೆವರು ಸುರಿಸುತ್ತೇನೆ. ಉಡುಪಿ ಕ್ಷೇತ್ರದಲ್ಲಿ ದೇಶದಲ್ಲೇ ನಂಬರ್ ಒನ್ ಆಗಿ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಮುಖಂಡ ರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಜನಾರ್ದನ ಭಂಡಾರ್ಕಾರ್, ಮುಖಂಡರಾದ ದಿನೇಶ್ ಪುತ್ರನ್, ನರಸಿಂಹಮೂರ್ತಿ, ಶಬ್ಬೀರ್ ಅಹ್ಮದ್, ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.