ಚುನಾವಣಾ ಕರ್ತವ್ಯಕ್ಕೆ ಬ್ಯಾಂಕ್ ಸಿಬ್ಬಂದಿಗಳು: ಮೇ 11ಕ್ಕೆ ಬ್ಯಾಂಕ್ ವ್ಯವಹಾರದಲ್ಲಿ ವ್ಯತ್ಯಯ
Update: 2018-05-09 20:00 IST
ಉಡುಪಿ, ಮೇ 9: ಮೇ 12ರಂದು ಶನಿವಾರ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯ ಕರ್ತವ್ಯಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳ ಸಿಬ್ಬಂದಿಗಳನ್ನು ಸಹ ನಿಯೋಜಿಸಿದ್ದು, ಮೇ 11ರಂದು ಬ್ಯಾಂಕ್ ಸಿಬ್ಬಂದಿಗಳು ಮಸ್ಟರಿಂಗ್ ಕರ್ತವ್ಯಕ್ಕೆ ಹಾಜರಾಗುವುದರಿಂದ ಅಂದಿನ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
ಚುನಾವಣೆ ನಿಮಿತ್ತ ಮೇ 12 ಮತ್ತು 13ರ ರವಿವಾರದಂದು ಸಹ ಬ್ಯಾಂಕ್‌ಗಳಿಗೆ ರಜೆ ಇರುವುದರಿಂದ ಗ್ರಾಹಕರು ಮುಂಚಿತವಾಗಿ ತಮ್ಮ ವ್ಯವಹಾರಗಳನ್ನು ಮುಗಿಸಿಕೊಂಡು ಸಹಕರಿಸಲು ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ಸಾಕಷ್ಟು ದುಡ್ಡನ್ನು ಭರ್ತಿ ಮಾಡಲಾಗುತ್ತದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.