×
Ad

ದ.ಕ.ಜಿಲ್ಲೆಯ ಎಂಟೂ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುವುದು ಖಚಿತ : ಫಾರೂಕ್ ಉಳ್ಳಾಲ್

Update: 2018-05-09 21:21 IST

ಮಂಗಳೂರು, ಮೇ 9: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದ ಜನಪರ ಕಾರ್ಯಕ್ರಮಗಳು ರಾಜ್ಯಾದ್ಯಂತ ಜನ ಮನ್ನಣೆಗೆ ಪಾತ್ರವಾಗಿ ಕರ್ನಾಟಕದ ಆಡಳಿತವನ್ನು ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ವಹಿಸಲಿದೆ. ನಮ್ಮ ಜಿಲ್ಲೆಯಲ್ಲೂ ಕಾಂಗ್ರೆಸ್ ಐತಿಹಾಸಿಕ ವಿಜಯವನ್ನು ದಾಖಲಿಸಲಿದ್ದು, ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಪ್ರಚಂಡ ಗೆಲುವು ಕಾಣಲಿವೆ ಎಂದು ಕರ್ನಾಟಕ ಪ್ರದೇಶ ಪ್ರಚಾರ ಸಮಿತಿ ಜಿಲ್ಲಾ ಉಸ್ತುವಾರಿ ವೀಕ್ಷಕ ಫಾರೂಕ್ ಉಳ್ಳಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳು ಆಡಳಿತದಲ್ಲಿದ್ದಾಗ ನಡೆಸಿದ ಭ್ರಷ್ಟಾಚಾರ ಮತ್ತು  ಕೆಲವು ಸಂಪುಟ ಸಚಿವರ ಕುಖ್ಯಾತಿಯೇ ಆ ಪಕ್ಷಗಳ ಹೀನಾಯ ಸೋಲಿಗೆ ಕಾರಣವಾಗಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನತೆಯ ಮುಂದಿಟ್ಟ 165  ಆಶ್ವಾಸನೆಗಳ ಪೈಕಿ 158 ಯೋಜನೆಗಳನ್ನು ಅನುಷ್ಠಾನಕ್ಕೆ ತಂದ  ಸಿದ್ದರಾಮಯ್ಯ ನೇತೃತ್ವದ ಸರಕಾರದ ಪ್ರಾಮಾಣಿಕತೆ, ದಕ್ಷತೆ ಮತ್ತು ಬದ್ಧತೆ ಎಲ್ಲಾ ವರ್ಗಗಳ ಜನರ ನಂಬಿಕೆಗೆ ಪಾತ್ರವಾಗಿದ್ದು,  ಜಿಲ್ಲೆಯಲ್ಲಿ ಈ ಹಿಂದೆ ಎಂದೂ ನಡೆಯದ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿದೆ ಎಂದರು.

ಅನ್ನ ಭಾಗ್ಯ, ಸರಳೀಕೃತ ಮಾನದಂಡದ ಬಿಪಿಎಲ್ ಪಡಿತರ ಚೀಟಿ, ಇಂದಿರಾ ಕ್ಯಾಂಟೀನ್, ಶ್ರಮಶಕ್ತಿ ಲೋನ್, ಶಾಧೀ ಭಾಗ್ಯ, ಕ್ಷೀರ ಭಾಗ್ಯ,  ವಿದ್ಯಾರ್ಥಿ ಗಳಿಗೆ ಉಚಿತ ಬಸ್ ಪಾಸ್, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಆರ್.ಟಿ.ಎ.ಸ್ಕೀಮ್ ಮುಂತಾದ ಜನ ಸಾಮಾನ್ಯರ ಬದುಕಿಗೆ ಕಾಯಕಲ್ಪ ನೀಡುವ ಸುಧಾರಣೆಗಳೊಂದಿಗೆ ಹಾಗೂ ಐದು ವರ್ಷಗಳ ತನಕ ಒಬ್ಬನೇ ಮುಖ್ಯಮಂತ್ರಿ ಮೂಲಕ ಭದ್ರ ಸರಕಾರ ನೀಡಿದ ಕಾಂಗ್ರೆಸ್ ಜನರ ಪ್ರೀತಿಗೆ ಅರ್ಹ ವಾಗಿರುವುದರಿಂದ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುವುದು ಶತ ಸಿದ್ಧ ಎಂದು ಫಾರೂಕ್ ಉಳ್ಳಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News