ಕಾರಿಗೆ ಟ್ಯಾಂಕರ್ ಢಿಕ್ಕಿ: ಮೂವರು ಮಕ್ಕಳ ಸಹಿತ 7 ಮಂದಿ ಸಾವು

Update: 2018-05-09 15:53 GMT

ವಡೋದರ, ಮೇ 9: ಬುಧವಾರ ಮುಂಜಾನೆ ಗುಜರಾತ್‌ನ ಛೋಟಉದೆಪುರ್ ಜಿಲ್ಲೆಯಲ್ಲಿ ಕಾರು ಮತ್ತು ಟ್ಯಾಂಕರ್ ಮುಖಾಮುಖಿ ಢಿಕ್ಕಿಯಾಗಿ ಎರಡು ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ . ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನೆಲೆಸಿರುವ ಎರಡು ಕುಟುಂಬದವರು ಮಗುವೊಂದರ ಚಿಕಿತ್ಸೆಗಾಗಿ ವಡೋದರಕ್ಕೆ ಕಾರಿನಲ್ಲಿ ತೆರಳುತ್ತಿತ್ತು. ಬುಧವಾರ ಬೆಳಿಗ್ಗೆ 6:00 ಗಂಟೆಯ ವೇಳೆಗೆ ಗುಜರಾತ್‌ನ ರಂಗಾಪುರ ಗ್ರಾಮದಲ್ಲಿ ಎದುರು ದಿಕ್ಕಿನಿಂದ ಧಾವಿಸಿ ಬಂದ ಟ್ಯಾಂಕರ್ ಕಾರಿಗೆ ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಟ್ಯಾಂಕರ್‌ನ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಢಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಕಾರಿನಲ್ಲಿ ಸಿಲುಕಿಕೊಂಡಿದ್ದವರನ್ನು ಹೊರಗೆ ತಂದಿದ್ದು ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕಿತ್ಸೆ ಪಡೆಯಲು ತೆರಳುತ್ತಿದ್ದ ಮಗು ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಅಪಘಾತದ ಕಾರಣ ಹಲವು ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ತಡೆಯುಂಟಾಗಿತ್ತು. ಬಳಿಕ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News