ಏಕಕಾಲದಲ್ಲಿ ಚುನಾವಣೆಗೆ ಪೂರ್ವಸಿದ್ಧತೆ ಅಗತ್ಯ: ಚುನಾವಣಾ ಆಯೋಗ

Update: 2018-05-09 15:57 GMT

ಹೊಸದಿಲ್ಲಿ, ಮೇ 9: ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಕ್ರಿಯೆ ಚಾಲನೆಗೆ ಬರಲು ಸಾಕಷ್ಟು ಪೂರ್ವಸಿದ್ಧತೆಯ ಅಗತ್ಯವಿದೆ. ಇದು ತರಾತುರಿಯಲ್ಲಿ ಕೈಗೊಳ್ಳುವ ನಿರ್ಧಾರವಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಓಂಪ್ರಕಾಶ್ ರಾವತ್ ಹೇಳಿದ್ದಾರೆ.

ಕುದುರೆ ಗಾಡಿಯನ್ನು ಎಳೆಯಬೇಕೇ ಹೊರತು ಕುದುರೆಯ ಎದುರು ಗಾಡಿ ಕಟ್ಟಲು ಸಾಧ್ಯವಿಲ್ಲ. ಅದೇ ರೀತಿ ಕಾನೂನಿನ ಚೌಕಟ್ಟು ರೂಪಿಸಿದ ಬಳಿಕ ವ್ಯವಸ್ಥಾಪನ ವಿಷಯದ ಬಗ್ಗೆ ಗಮನ ಹರಿಸಬಹುದು. ಕಾನೂನಿಗೆ ಸಾಂವಿಧಾನಿಕ ತಿದ್ದುಪಡಿ ಮಾಡುವುದು ಇತ್ಯಾದಿ ಪ್ರಕ್ರಿಯೆಗಳು ಸುದೀರ್ಘಾವಧಿಯದ್ದಾಗಿವೆ. ಕಾನೂನಿನ ಚೌಕಟ್ಟು ಸಿದ್ಧಗೊಳ್ಳುವವರೆಗೆ ಈ ವಿಷಯದ ಕುರಿತು(ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು) ಮಾತಾಡುವುದು ಬೇಡ ಎಂದು ರಾವತ್ ಹೇಳಿದರು.

ಚುನಾವಣಾ ಆಯೋಗವು ಸಾಂವಿಧಾನಿಕವಾಗಿ ರೂಪುಗೊಂಡ ಸಂಸ್ಥೆಯಾಗಿದೆ. ನಾವು ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಕಾನೂನಿನಲ್ಲಿ ತಿಳಿಸಿದಂತೆ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದವರು ಹೇಳಿದರು.

 ರಾಜ್ಯ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಪ್ರಧಾನಿ ಮೋದಿ ಒಲವು ಹೊಂದಿರುವ ಹಿನ್ನೆಲೆಯಲ್ಲಿ , ಈ ವಿಷಯವನ್ನು ಕಾನೂನಾತ್ಮಕ ಹಾಗೂ ವ್ಯವಸ್ಥಾಪನಾತ್ಮಕ ದೃಷ್ಟಿಕೋನದಿಂದ ( ಸಂವಿಧಾನ ತಿದ್ದುಪಡಿ, ಮೂಲಭೂತ ಸೌಕರ್ಯ ಹಾಗೂ ಆರ್ಥಿಕ ಸೌಲಭ್ಯ ಇತ್ಯಾದಿಗಳ ಬಗ್ಗೆ ) ಪರಿಶೀಲಿಸುವಂತೆ ಕಾನೂನು ಸಚಿವಾಲಯ ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿತ್ತು. ಈ ಯೋಜನೆಗೆ ಆಯೋಗ ಬೆಂಬಲ ಸೂಚಿಸಿದ್ದರೂ, ಈ ಪ್ರಕ್ರಿಯೆ ದುಬಾರಿ ವೆಚ್ಚದ್ದಾಗಿದ್ದು, ಸಂವಿಧಾನದ ತಿದ್ದುಪಡಿಯ ಅಗತ್ಯವಿದೆ. ಕೆಲವು ರಾಜ್ಯಗಳ ವಿಧಾನಸಭೆಯ ಅವಧಿಯನ್ನು ಕಡಿತಗೊಳಿಸಿದರೆ, ಇನ್ನು ಕೆಲವು ರಾಜ್ಯಗಳ ವಿಧಾನಸಭೆಯ ಅವಧಿಯನ್ನು ಅಧಿಕಗೊಳಿಸಬೇಕಾಗುತ್ತದೆ. ಈ ಪ್ರಸ್ತಾವನೆಗೆ ಸುಮಾರು 9,000 ಕೋಟಿ ರೂ. ವೆಚ್ಚ ತಗಲಬಹುದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News