×
Ad

ಉ.ಪ್ರದೇಶ: ಗುಂಡಿಕ್ಕಿ ಬಿಜೆಪಿ ಕಾರ್ಪೊರೇಟರ್ ಹತ್ಯೆ

Update: 2018-05-09 21:32 IST

ಲಕ್ನೊ, ಮೇ 9: ಗುಂಡು ಹಾರಿಸಿ ಬಿಜೆಪಿ ಕಾರ್ಪೊರೇಟರ್ ರನ್ನು ಹತ್ಯೆ ಮಾಡಿದ ಘಟನೆ ಮಂಗಳವಾರ ರಾತ್ರಿ ಫೂಲ್‌ಪುರ ಎಂಬಲ್ಲಿ ನಡೆದಿದ್ದು, ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಚಂಗಂಜ್ ವಾರ್ಡ್‌ನಿಂದ ಚುನಾಯಿತರಾಗಿದ್ದ ಬಿಜೆಪಿ ಕಾರ್ಪೊರೇಟರ್ 34ರ ಹರೆಯದ ಪವಾನ್ ಕೇಸರಿ ಸ್ಥಳೀಯ ಹೋಟೆಲ್‌ನಲ್ಲಿ ರಾತ್ರಿ ಊಟ ಮಾಡಿ ಬಳಿಕ ತನ್ನ ಮಿತ್ರನನ್ನು ಮನೆಗೆ ಬಿಡಲು ತೆರಳಿದ್ದಾಗ ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಕೇಸರಿ ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, ಅವರ ಮಿತ್ರ ಆರಿಫ್ ಪಾರಾಗಿದ್ದಾರೆ. ಗುಂಡಿನ ದಾಳಿ ನಡೆಯುವ ಸಂದರ್ಭ ಅದೇ ದಾರಿಯಲ್ಲಿ ಸಾಗುತ್ತಿದ್ದ ಮಹಿಳೆಯೊಬ್ಬರಿಗೆ ಗುಂಡು ತಗುಲಿ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಕೀಯ ದ್ವೇಷದಿಂದ ಈ ಕೊಲೆ ನಡೆಸಲಾಗಿದೆ ಎಂದು ಕೇಸರಿಯವರ ಕುಟುಂಬದವರು ಆರೋಪಿಸಿದ್ದು ನಾಲ್ವರ ವಿರುದ್ಧ ದೂರು ದಾಖಲಿಸಿದೆ. ಇವರಲ್ಲಿ ಇಬ್ಬರನ್ನು ಸೋನು ಮತ್ತು ಪರ್ವೇಝ್ ಆಲಂ ಎಂದು ಗುರುತಿಸಲಾಗಿದೆ. ಸೋನುವಿನ ಸಹೋದರ ಶೆಹಝಾದೆ ಎಂಬಾತನನ್ನು ಕೆಲ ತಿಂಗಳ ಹಿಂದೆ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿತ್ತು. ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಘಟನೆಗೆ ಸಂಬಂಧಿಸಿ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News