ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾಗೆ ಸೇನಾಧಿಕಾರಿಗಳ ನೋಟಿಸ್

Update: 2018-05-09 16:54 GMT

ಹೊಸದಿಲ್ಲಿ, ಮೇ 9: ಹನ್ನೊಂದು ಮಂದಿ ಸೇವೆ ಸಲ್ಲಿಸುತ್ತಿರುವ ಸೇನೆಯ ಅಧಿಕಾರಿಗಳು, 7 ನಿವೃತ್ತ ಅಧಿಕಾರಿಗಳು ಸೇರಿದಂತೆ 21 ಮಂದಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ ಹಾಗು ಹರಾಜು ಸಂಸ್ಥೆಯೊಂದಕ್ಕೆ ನೋಟಿಸ್ ಕಳುಹಿಸಿದ್ದಾರೆ. ಬಾಲಿವುಡ್ ಚಿತ್ರ ರುಸ್ತುಂನಲ್ಲಿ ಬಳಸಲಾಗಿರುವ ನೌಕಾದಳದ ಅಧಿಕಾರಿಯ ಉಡುಪಿನ ಹರಾಜು ಪ್ರಕ್ರಿಯೆಗೆ ಸಂಬಂಧಿಸಿ ಈ ನೋಟಿಸ್ ಕಳುಹಿಸಲಾಗಿದೆ.

ರುಸ್ತುಂನಲ್ಲಿ ಅಕ್ಷಯ್ ಕುಮಾರ್ ಧರಿಸಿದ್ದ ನೌಕಾದಳದ ಅಧಿಕಾರಿಯ ಉಡುಪನ್ನು ಹರಾಜು ಮಾಡಬಾರದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದ್ದು, ಇದಕ್ಕೊಪ್ಪದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸಲಾಗಿದೆ.

“ಸಶಸ್ತ್ರ ಪಡೆಗಳ ಉಡುಪನ್ನು ಹೋಲುವ ಉಡುಗೆಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ. ಈ ಸಮವಸ್ತ್ರದಲ್ಲಿರುವ ಬ್ಯಾಡ್ಜ್ ಗಳನ್ನು ದೇಶವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ” ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. “ಪಠಾಣ್ ಕೋಟ್ ದಾಳಿಯ ನಂತರ ಸೇನೆ ಮಾದರಿಯ ಸಮವಸ್ತ್ರಗಳನ್ನು ಧರಿಸುವುದನ್ನು ಕಡಿಮೆಗೊಳಿಸುವಂತೆ ಜನರಲ್ಲಿ ಹಾಗು ಅಂತಹ ವಸ್ತ್ರಗಳನ್ನು ಮಾರಾಟ ಮಾಡದಂತೆ ವ್ಯಾಪಾರಿಗಳಲ್ಲಿ ಸೇನೆಯು ತಿಳಿಸಿತ್ತು. ನೌಕಾದಳದ ಅಧಿಕಾರಿಯ ಸಮವಸ್ತ್ರವನ್ನು ಹರಾಜಿಗೆ ಹಾಕುವ ಮೂಲಕ ನೀವು ದೇಶದ ಭದ್ರತೆಗೆ ಅಗೌರವ ತೋರಿಸಿದ್ದೀರಿ ಹಾಗು ಸಶಸ್ತ್ರ ಪಡೆಗಳ ಭಾವನೆಗಳನ್ನು ಘಾಸಿಗೊಳಿಸಿದ್ದೀರಿ” ಎಂದು ನೋಟಿಸ್ ನಲ್ಲಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News