×
Ad

'ಕಣ್ಣೂರು ವಾರ್ಡ್ ಅಭಿವೃದ್ಧಿ ಕಾರ್ಯ ತನ್ನದೆಂದ ಲೋಬೊ' ಕಾರ್ಪೋರೇಟರ್ ಸುಧೀರ್ ಶೆಟ್ಟಿ ಆರೋಪ

Update: 2018-05-09 22:31 IST

ಮಂಗಳೂರು, ಮೇ 9: ಶಾಸಕ ಜೆ.ಆರ್.ಲೋಬೊ ಅವರು ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗೆ ಸಂಬಂಧಿಸಿ ಬುಧವಾರ ವಿತರಿಸಿದ ಸಾಧನೆಯ ಪುಸ್ತಕದಲ್ಲಿ ಕಣ್ಣೂರು ವಾರ್ಡ್‌ನ ಅಭಿವೃದ್ಧಿ ಕಾರ್ಯಗಳು ತನ್ನ ಸಾಧನೆಯೆಂದು ಕೊಂಡಿದ್ದಾರೆ ಎಂದು ಕಣ್ಣೂರು ವಾರ್ಡ್ ಬಿಜೆಪಿ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಬೊ ಅವರು ಸಾಧನೆಯ ಪುಸ್ತಕದಲ್ಲಿ ಉಲ್ಲೇಖಿಸಿರುವ ಕಣ್ಣೂರು ವಾರ್ಡ್‌ನ ಅಭಿವೃದ್ಧಿ ಕೆಲಸಗಳು ನಾನು ಮಾಡಿರುವುದಾಗಿದೆ. ಆದರೆ, ಅವರ ಸಾಧನೆಯೆಂದು ಸುಳ್ಳು ಹೇಳಿಕೊಂಡಿದ್ದಾರೆ. ಈ ಬಗ್ಗೆ ನಾನು ಭಗವದ್ಗೀತೆಯನ್ನು ಮುಟ್ಟಿ ಪ್ರಮಾಣ ಮಾಡುತ್ತೇನೆ. ಒಂದು ವೇಳೆ ನಾನು ಮಾಡಿರುವ ಕಾಮಗಾರಿಗಳಲ್ಲಿ ಲೋಬೊ ಅವರ ಪ್ರಯತ್ನ ಇದ್ದರೆ ಅವರು ಬೈಬಲ್ ಮುಟ್ಟಿ ಪ್ರಮಾಣ ಮಾಡಲಿ ಎಂದು ಸುಧೀರ್ ಶೆಟ್ಟಿ ಸವಾಲು ಹಾಕಿದ್ದಾರೆ.

ರಾಜಕೀಯ ಸನ್ಯಾಸ: 

ಕಣ್ಣೂರು ವಾರ್ಡ್‌ನಲ್ಲಿ ಕೈಗೊಂಡ 182 ಕಾಮಗಾರಿಗಳನ್ನು ಪಟ್ಟಿ ಮಾಡಿ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಮನಪಾ ಸದಸ್ಯರ ನಿಧಿ, ಸಾಮಾನ್ಯ ನಿಧಿ ಬಳಸಿ ನಾನು ಜನರಿಗಾಗಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ತನ್ನ ಸಾಧನೆ ಎಂದು ಲೋಬೊ ಹೇಳಿಕೊಂಡಿದ್ದಾರೆ. ಇದು ಚುನಾವಣಾ ಗಿಮಿಕ್. ಪುಸ್ತಕವನ್ನು ನೋಡಿದ ವಾರ್ಡ್‌ನ ಜನತೆ ಈ ಬಗ್ಗೆ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಲೋಬೊ ಅವರು ಕಣ್ಣೂರು ವಾರ್ಡ್‌ಗೆ 20 ಲಕ್ಷ ರೂ. ಮಾತ್ರ ಅನುದಾನ ನೀಡಿ ಕಾಮಗಾರಿ ನಡೆಸಿದ್ದಾರೆ. ಆದರೆ, ನಾನು ಮನಪಾ ಸದಸ್ಯನಾಗಿ 6 ಕೋಟಿ ಗೂ ಅಧಿಕ ವೆಚ್ಚದ ಕಾಮಗಾರಿ ನಡೆಸಿದ್ದೇನೆ. ಈ ಎಲ್ಲ ಕಾಮಗಾರಿಯನ್ನು ಲೋಬೊ ನಡೆಸಿರುವುದು ಎಂದು ಸಾಬೀತುಪಡಿಸಿದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ. ಇಲ್ಲವಾದಲ್ಲಿ ಶಾಸಕ ಲೋಬೊ ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎಂದು ಎಂದರು.

ಕಾರ್ಪೋರೇಟರ್ ಜಯಂತಿ ಆಚಾರ್ ಮಾತನಾಡಿ, ಮಣ್ಣಗುಡ್ಡ ವಾರ್ಡ್‌ನಲ್ಲೂ ಲೋಬೊ ಸಾಧನೆಯ ಪುಸ್ತಕ ಹಂಚಲಾಗಿದೆ. ಮನಪಾ ನಿಧಿಯಿಂದ ತಾನು ಕೈಗೊಂಡ ಕಾಮಗಾರಿಯನ್ನು ಲೋಬೊ ತನ್ನ ಸಾಧನೆ ಎಂದು ಹೇಳಿಕೊಂಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಪೋರೇಟರ್‌ಗಳಾದ ರೂಪಾ ಡಿ. ಬಂಗೇರ, ಜಯಂತಿ ಆಚಾರ್, ಮೀರಾ ಕರ್ಕೇರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News