ಶರೀಫ್ ಭಾರತದಲ್ಲಿ ಕಪ್ಪುಹಣ ಬಿಳುಪು ಮಾಡಿದ ವರದಿ ಸುಳ್ಳು: ವಿಶ್ವಬ್ಯಾಂಕ್ ಸ್ಪಷ್ಟೀಕರಣ

Update: 2018-05-09 17:45 GMT

ವಾಶಿಂಗ್ಟನ್, ಮೇ 9: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ 4.9 ಬಿಲಿಯ ಡಾಲರ್ (ಸುಮಾರು 33,000 ಕೋಟಿ ಭಾರತೀಯ ರೂಪಾಯಿ) ಕಪ್ಪುಹಣವನ್ನು ಭಾರತಕ್ಕೆ ಕಳುಹಿಸಿ ಬಿಳಿ ಮಾಡಿದ್ದಾರೆ ಎಂಬ ಪಾಕಿಸ್ತಾನಿ ಮಾಧ್ಯಮಗಳ ವರದಿಗಳು ‘ತಪ್ಪು’ ಎಂದು ವಿಶ್ವಬ್ಯಾಂಕ್ ಹೇಳಿದೆ.

ಈ ವರದಿಗಳ ಬೆನ್ನಿಗೇ, ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಶಾಮೀಲಾಗಿದ್ದಾರೆನ್ನಲಾದ ಶರೀಫ್ ಮತ್ತು ಇತರರ ವಿರುದ್ಧ ತನಿಖೆಗೆ ಪಾಕಿಸ್ತಾನದ ಉನ್ನತ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ‘ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ’ ಆದೇಶ ನೀಡಿದೆ.

‘‘ಹಿಂದಿನ ದಿನ ಕೆಲವು ಮಾಧ್ಯಮ ವರದಿಗಳನ್ನು ನೋಡಿದೆವು. ಅವುಗಳಲ್ಲಿ ವಿಶ್ವಬ್ಯಾಂಕ್‌ನ 2016ರ ಹಣ ರವಾನೆ ಮತ್ತು ವಲಸೆ ವರದಿಯನ್ನು ಉಲ್ಲೇಖಿಸಲಾಗಿತ್ತು. ಆ ವರದಿಗಳು ಸರಿಯಲ್ಲ’’ ಎಂದು ವಿಶ್ವಬ್ಯಾಂಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಿಶ್ವಬ್ಯಾಂಕ್‌ನ ಹಣ ರವಾನೆ ಮತ್ತು ವಲಸೆ ವರದಿಯು, ಜಗತ್ತಿನಾದ್ಯಂತದ ವಲಸೆ ಮತ್ತು ಹಣ ರವಾನೆಯನ್ನು ಅಂದಾಜಿಸುವ ವಿಶ್ವಬ್ಯಾಂಕ್‌ನ ಪ್ರಯತ್ನವಾಗಿದೆ ಎಂದು ಅದು ಹೇಳಿದೆ.

‘‘ವರದಿಯಲ್ಲಿ ಕಪ್ಪುಹಣ ಬಿಳುಪು ಕುರಿತ ಯಾವುದೇ ಪ್ರಸ್ತಾಪವಿಲ್ಲ ಹಾಗೂ ಅದರಲ್ಲಿ ಯಾರ ಹೆಸರೂ ಇಲ್ಲ’’ ಎಂದು ವಿಶ್ವಬ್ಯಾಂಕ್‌ನ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News