ಮತ್ತೊಮ್ಮೆ ಸ್ಫೋಟಿಸಿದ ಹವಾಯಿ ಜ್ವಾಲಾಮುಖಿ

Update: 2018-05-09 17:49 GMT

ಪಹೋ (ಹವಾಯಿ), ಮೇ 9: ಅಮೆರಿಕದ ಹವಾಯಿ ದ್ವೀಪದಲ್ಲಿರುವ ಕೀಲೋಯ ಜ್ವಾಲಾಮುಖಿ ಮಂಗಳವಾರ ಮತ್ತೊಮ್ಮೆ ಸ್ಫೋಟಿಸಿದ್ದು, ಎರಡು ಹೊಸ ರಂಧ್ರಗಳಿಂದ ವಿಷಾನಿಲಗಳು ಹೊರಹೊಮ್ಮುತ್ತಿವೆ.

ಈ ಹಿನ್ನೆಲೆಯಲ್ಲಿ ಬಿಗ್ ಐಲ್ಯಾಂಡ್‌ನ ಇನ್ನೊಂದು ಊರಿನಿಂದ ಅಧಿಕಾರಿಗಳು ಜನರನ್ನು ತುರ್ತಾಗಿ ತೆರವುಗೊಳಿಸಿದ್ದಾರೆ.

ದ್ವೀಪದ ಪೂರ್ವ ಭಾಗದ ಲ್ಯಾನಿಪುನ ಗಾರ್ಡನ್ಸ್‌ನಲ್ಲಿರುವ ನಿವಾಸಿಗಳು ತಕ್ಷಣ ತಮ್ಮ ಮನೆಗಳನ್ನು ತೊರೆಯುವಂತೆ ಆದೇಶ ನೀಡುವ ತುರ್ತು ಹೇಳಿಕೆಯೊಂದನ್ನು ಹವಾಯಿ ಕೌಂಟಿಯ ನಾಗರಿಕ ರಕ್ಷಣೆ ಇಲಾಖೆ ಹೊರಡಿಸಿದೆ.

‘‘ಎರಡು ಹೊಸ ಜ್ವಾಲಾಮುಖಿ ರಂಧ್ರಗಳನ್ನು ಹವಾಯಿಯನ್ ಜ್ವಾಲಾಮುಖಿ ವೀಕ್ಷಣಾಲಯ ಖಚಿತಪಡಿಸಿದೆ. ಲ್ಯಾನಿಪುರದ ಎಲ್ಲ ನಿವಾಸಿಗಳು ತಕ್ಷಣ ಹೊರಡಬೇಕು’’ ಎಂದು ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ರಸ್ತೆಗಳು ಕೂಡುವ ಎರಡು ಸ್ಥಳಗಳಲ್ಲಿ ಕಾಣಿಸಿಕೊಂಡಿರುವ ರಂಧ್ರಗಳು ಸಕ್ರಿಯವಾಗಿವೆ’’ ಎಂದು ಹೇಳಿಕೆ ತಿಳಿಸಿದೆ.

ಕೀಲೋಯ ಜ್ವಾಲಾಮುಖಿ ಸ್ಫೋಟದ ಹಿನ್ನೆಲೆಯಲ್ಲಿ ಈಗಾಗಲೇ ಲೀಲಾನಿ ಎಸ್ಟೇಟ್ಸ್ ಊರಿನ ಜನರನ್ನು ಸ್ಥಳಾಂತರಿಸಲಾಗಿದೆ. ಇಲ್ಲಿನ 35 ಮನೆಗಳು ಮತ್ತು ಇತರ ಎರಡು ಕಟ್ಟಡಗಳು ಈಗಾಗಲೇ ಜ್ವಾಲಾಮುಖಿಗೆ ಆಹುತಿಯಾಗಿವೆ.

ಲೀಲಾನಿ ಎಸ್ಟೇಟ್ಸ್‌ನ ಸುಮಾರು 1,700 ಮಂದಿ ಈಗಾಗಲೇ ತಮ್ಮ ಮನೆಗಳನ್ನು ತೊರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News