ಎಚ್‌ಆರ್‌ಡಬ್ಲ್ಯು ನಿರ್ದೇಶಕನಿಗೆ ಇಸ್ರೇಲ್ ತೊರೆಯಲು ಆದೇಶ

Update: 2018-05-09 17:55 GMT

ಜೆರುಸಲೇಂ, ಮೇ 9: ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ನ ನಿರ್ದೇಶಕರೊಬ್ಬರು ದೇಶ ತೊರೆಯಲು ಇಸ್ರೇಲ್ ಎರಡು ವಾರಗಳ ಕಾಲಾವಕಾಶ ನೀಡಿದೆ.

ಹ್ಯೂಮನ್ ರೈಟ್ಸ್ ವಾಚ್‌ನ ಇಸ್ರೇಲ್ ಮತ್ತು ಫೆಲೆಸ್ತೀನ್ ನಿರ್ದೇಶಕ, ಅಮೆರಿಕದ ಪ್ರಜೆಯಾಗಿರುವ ಉಮರ್ ಶಾಕಿರ್ ಇಸ್ರೇಲ್‌ನ ಬಹಿಷ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅವರ ವಾಸ್ತವ್ಯ ಪರ್ಮಿಟನ್ನು ರದ್ದುಪಡಿಸಲಾಗಿದೆ ಎಂದು ಇಸ್ರೇಲ್ ಆಂತರಿಕ ಸಚಿವಾಲಯ ಮಂಗಳವಾರ ತಿಳಿಸಿದೆ.

 ‘‘ಶಾಕಿರ್ ಹಲವು ವರ್ಷಗಳ ಕಾಲ ಬಿಡಿಎಸ್ ಕಾರ್ಯಕರ್ತನಾಗಿದ್ದರು ಹಾಗೂ ಆ ಅವಧಿಯಲ್ಲಿ ಇಸ್ರೇಲ್‌ನ ಬಹಿಷ್ಕಾರಕ್ಕಾಗಿ ಸಕ್ರಿಯವಾಗಿ ಆಂದೋಲನ ನಡೆಸಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ, ವ್ಯೂಹಾತ್ಮಕ ವ್ಯವಹಾರಗಳ ಸಚಿವಾಲಯವು ಮಾಡಿದ ಶಿಫಾರಸಿನಂತೆ ಅವರ ವಾಸ್ತವ್ಯ ಪರ್ಮಿಟನ್ನು ರದ್ದುಪಡಿಸಲು ಸಚಿವಾಲಯ ನಿರ್ಧರಿಸಿದೆ’’ ಎಂದು ಆಂತರಿಕ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬಿಡಿಎಸ್ (ಬಾಯ್ಕಟ್ (ಬಹಿಷ್ಕರಿಸಿ), ಡೈವೆಸ್ಟ್‌ಮೆಂಟ್ (ಹೂಡಿಕೆ ಹಿಂದಕ್ಕೆ ಪಡೆಯಿರಿ) ಮತ್ತು ಸ್ಯಾಂಕ್ಷನ್ಸ್ (ದಿಗ್ಬಂಧನ ವಿಧಿಸಿ))ಗಾಗಿ ಜಾಗತಿಕ ಅಭಿಯಾನವನ್ನು ಬೆಂಬಲಿಸುವ ಗುಂಪುಗಳ ವಿರುದ್ಧ ಇಸ್ರೇಲ್ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ಆಕ್ರಮಿತ ಫೆಲೆಸ್ತೀನ್ ಭೂಭಾಗಗಳನ್ನು ತೆರವುಗೊಳಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರುವುದು ಬಿಡಿಎಸ್ ಆಂದೋಲನದ ಉದ್ದೇಶವಾಗಿದೆ.

ಫೆಲೆಸ್ತೀನ್ ಭೂಭಾಗಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದನ್ನು ವಿರೋಧಿಸಿ ಹ್ಯೂಮನ್ ರೈಟ್ಸ್ ವಾಚ್ ಹಲವಾರು ವರದಿಗಳನ್ನು ಬರೆದಿದೆ.

ಇಸ್ರೇಲ್‌ನಲ್ಲಿ ಕೆಲಸ ಮಾಡಲು ಶಾಕಿರ್‌ಗೆ 2017 ಎಪ್ರಿಲ್‌ನಲ್ಲಿ ಅನುಮತಿ ದೊರೆತಿತ್ತು.

ಉಸಿರುಗಟ್ಟಿಸುವ ಯತ್ನ

‘‘ಇದು ಶಾಕಿರ್ ಒಬ್ಬರಿಗೆ ಸಂಬಂಧಪಟ್ಟ ವಿಷಯವಲ್ಲ, ಹ್ಯೂಮನ್ ರೈಟ್ಸ್ ವಾಚ್‌ನ ಉಸಿರುಗಟ್ಟಿಸುವ ಹಾಗೂ ಇಸ್ರೇಲ್‌ನ ಮಾನವಹಕ್ಕುಗಳ ದಾಖಲೆಗಳ ಕುರಿತ ಟೀಕೆಗಳನ್ನು ನಿಲ್ಲಿಸುವ ಪ್ರಯತ್ನವಾಗಿದೆ’’ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿಕೆಯೊಂದರಲ್ಲಿ ಆರೋಪಿಸಿದೆ.

‘‘ಹ್ಯೂಮನ್ ರೈಟ್ಸ್ ವಾಚ್ ಆಗಲಿ, ಅದರ ಪ್ರತಿನಿಧಿ ಶಾಕಿರ್ ಆಗಲಿ ಇಸ್ರೇಲ್‌ನ ಬಹಿಷ್ಕಾರಕ್ಕಾಗಿ ಕೆಲಸ ಮಾಡುತ್ತಿಲ್ಲ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News