ಕೇಂದ್ರದ ಯಾವ ದಾಳಿಗೂ ಕಾಂಗ್ರೆಸ್ ಬೆದರದು: ಅಬ್ಬಾಸ್ ಅಲಿ

Update: 2018-05-10 11:34 GMT

ಬಂಟ್ವಾಳ, ಮೇ 10: ಕಾಂಗ್ರೆಸ್ ನಾಯಕರ ಮೇಲೆ ಉದ್ದೇಶಪೂರ್ವಕವಾಗಿ ಐಟಿ ದಾಳಿ ನಡೆಸುವ ಮೂಲಕ ಕೇಂದ್ರ ಸರಕಾರ ಇಲಾಖೆಯನ್ನು ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ. ನಿಮ್ಮ ಯಾವುದೇ ದಾಳಿಗೂ ಕಾಂಗ್ರೆಸ್ ಬೆದರದು ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಹೇಳಿದರು.

ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಗುರುವಾರ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಬಂಟ್ವಾಳದಲ್ಲಿ ಕಾಂಗ್ರೆಸ್ ನಾಯಕರಿಗೆ ಸೇರಿದ ವಿವಿಧ ವಸತಿಗೃಹಗಳಿಗೆ ಐಟಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿದರು. ಚುನಾವಣೆಗೆ ಇನ್ನೆರಡು ದಿನಗಳ ಬಾಕಿ ಇರುವಾಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಉದ್ಯಮಿಗಳು, ಪಕ್ಷದ ಮುಖಂಡರ ಕಚೇರಿ ಹಾಗೂ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸುತ್ತಿರುವುದು ಸೋಲಿನ ಹತಾಶೆಯಲ್ಲಿರುವ ಬಿಜೆಪಿಯ ಕುತಂತ್ರವಾಗಿದೆ. ಐಟಿ ಅಥವಾ ಇಡಿ ದಾಳಿ ಯಾವುದನ್ನೆ ಮಾಡಿಸಿದರೂ ಅದಕ್ಕೆ ಕಾಂಗ್ರೆಸ್ ಅಥವಾ ನಾಯಕರು ಹೆದರುವುದಿಲ್ಲ ಹಾಗೂ ಎದೆಗುಂದುವುದಿಲ್ಲ ಎಂದರು.

ವೇಣುಗೋಪಾಲ್ ಪಕ್ಷದ ಕರ್ನಾಟಕದ ಉಸ್ತುವಾರಿ ಸ್ಥಾನ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಬಹಳಷ್ಟು ಶಕ್ತಿಯುತವಾಗಿ ಬೆಳೆದಿದೆ. ಇದಕ್ಕೆ ಪೂರಕವಾಗಿ ಎಂಬಂತೆ ಸಿದ್ದರಾಮಯ್ಯನವರ ಜನಪರ ಆಡಳಿತವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿದ್ದು, ಕೂಡಾ ರಾಜ್ಯದ ಜನತೆಗೆ ಕಾಂಗ್ರೆಸ್ ಮೇಲಿನ ಪ್ರೀತಿ ಹೆಚ್ಚಲು ಕಾರಣವಾಗಿದೆ ಎಂದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಮಾತಾನಾಡಿ, ವಿರೋಧ ಪಕ್ಷದ ಅಪಪ್ರಚಾರದಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ನಿಷ್ಕ್ರಿಯಗೊಳಿಸುವ ತಂತ್ರಗಾರಿಕೆ ಯಾವತ್ತೂ ಫಲಿಸದು. ಶೇ.95ರಷ್ಟು ಭರವಸೆಗಳನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟಿರುವ ಸಿದ್ದರಾಮಯ್ಯ ಸರಕಾರಕ್ಕೆ ರಾಜ್ಯದ ಇಡೀ ಜನತೆಯೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರ ಮುಂದೆ ಬಿಜೆಪಿಯವರ ಯಾವ ಅಪಪ್ರಚಾರವೂ ನಡೆಯುವುದಿಲ್ಲ ಎಂದ ಅವರು, ರಮಾನಾಥ ರೈಯವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಇಡೀ ರಾಜ್ಯಕ್ಕೆ ಮಾದರಿಯಾಗಿವೆ ಎಂದು ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ಬಂಟ್ವಾಳ ಕ್ಷೇತ್ರದ ಜನರು ರಮಾನಾಥ ರೈಯವರ ಬೆನ್ನೆಲುಬಾಗಿ ನಿಂತಿದ್ದಾರೆ. ಸಿದ್ದರಾಮಯ್ಯ ರೈತರ ಸಾಲಮನ್ನಾ ಮಾಡುವುದರ ಮೂಲಕ ರಾಜ್ಯದ ರೈತರಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬೇಬಿ ಕುಂದರ್, ತಾಲೂಕು ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಬಾಲಕೃಷ್ಣ ಆಳ್ವ, ಪರಮೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News