×
Ad

ಮಂಗಳೂರು ಅಭಿವೃದ್ಧಿಗೆ ಜೆ.ಆರ್.ಲೋಬೋರ ಕೊಡುಗೆ ಏನೂ ಇಲ್ಲ: ಅಝೀಝ್ ಕುದ್ರೋಳಿ

Update: 2018-05-10 20:15 IST

ಮಂಗಳೂರು, ಮೇ 10: ಶಾಸಕ ಜೆ.ಆರ್. ಲೋಬೊ ಮಂಗಳೂರಿನ ಅಭಿವೃದ್ಧಿಗೆ ಏನೂ ಕೊಡುಗೆ ನೀಡಿಲ್ಲ ಎಂದು ಮನಪಾ ಸದಸ್ಯ ಹಾಗೂ ದ.ಕ.ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಕುದ್ರೋಳಿ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಶಾಸಕ ಜೆ.ಆರ್.ಲೋಬೊ ಎಲ್ಲಾ ಜಾತ್ಯತೀತ ತತ್ವಗಳನ್ನು ಗಾಳಿಗೆ ತೂರಿದ್ದಾರೆ. ಕೇವಲ ಜಾತಿ, ಧರ್ಮದ ಹೆಸರಿನಲ್ಲಿ ತಮಗೆ ಬೇಕಾದವರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ. ಕರಾವಳಿಯಲ್ಲಿ ನಡೆಯುವ ಅಹಿತಕರ ಘಟನೆ ಗಳಿಗೆ ಸಂಬಂಧಿಸಿ ನೈಜ ಆರೋಪಿಗಳನ್ನು ಬಂಧಿಸದೆ ನಿರಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್‌ನ ಜನಪ್ರತಿನಿಧಿಗಳೇ ಕಾರಣ. ಅದಕ್ಕೂ ಮೊದಲಿನ ದುಷ್ಕೃತ್ಯಗಳಿಗೆ ಬಿಜೆಪಿಗರು ಕೂಡ ಕಾರಣರಾಗಿದ್ದಾರೆ ಎಂದರು.

ಕಾಂಗ್ರೆಸ್ ಮುಸ್ಲಿಮರ ಮತವನ್ನು ಮಾತ್ರ ಬಯಸುತ್ತದೆ. ಆದರೆ, ಅಧಿಕಾರ ಬರುವಾಗ ಬದಿಗೆ ಸರಿಸುತ್ತದೆ. ಈ ಬಾರಿ ಮಂಗಳೂರು ಮೇಯರ್ ಸ್ಥಾನಕ್ಕೆ ಮುಸ್ಲಿಮ್ ಸದಸ್ಯರೊಬ್ಬರು ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಅವಕಾಶ ನೀಡದೆ ವಂಚಿಸಿದರು. ಕಾಂಗ್ರೆಸ್ ಮುಸ್ಲಿಮರಿಗೆ ಮಾಡುವ ಅನ್ಯಾಯವನ್ನು ಸಹಿಸಲಾರದೆ ಮಾಜಿ ಮೇಯರ್ ಕೆ.ಅಶ್ರಫ್ ಪಕ್ಷವನ್ನೇ ತ್ಯಜಿಸಿದ್ದಾರೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಕಾಂಗ್ರೆಸ್ ವಾಸ್ತವದಲ್ಲಿ ಮಾಡುವುದಾದರೂ ಏನು ಎಂದು ಅಝೀಝ್ ಕುದ್ರೋಳಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್ ರಮೀಝಾ ನಾಸರ್, ಮಂಗಳೂರು ದಕ್ಷಿಣ ಕ್ಷೇತ್ರದ ಪಕ್ಷದ ಅಭ್ಯರ್ಥಿ ರತ್ನಾಕರ ಸುವರ್ಣ, ಪಕ್ಷದ ದಕ್ಷಿಣ ಕ್ಷೇತ್ರಾಧ್ಯಕ್ಷ ವಸಂತ ಪೂಜಾರಿ, ಜಿಲ್ಲಾ ಕಾರ್ಯಾಧ್ಯಕ್ಷ ರಾಮ್ ಗಣೇಶ್, ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಮುನೀರ್ ಮುಕ್ಕಚೇರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News