×
Ad

ಕರ್ಣಾಟಕ ಬ್ಯಾಂಕ್ ಚಿಟ್ಪಾಡಿ ಶಾಖೆ ಉದ್ಘಾಟನೆ

Update: 2018-05-10 20:28 IST

ಉಡುಪಿ, ಮೇ 10: ಚಿಟ್ಪಾಡಿ ಬೀಡಿನಗುಡ್ಡೆಯ ಲಕ್ಷ್ಮೀ ಟ್ರೇಡ್ ಸೆಂಟರ್ ನಲ್ಲಿ ಇಂದು ಪ್ರಾರಂಭಗೊಂಡ ಕರ್ಣಾಟಕ ಬ್ಯಾಂಕಿನ 801 ಶಾಖೆಯನ್ನು ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಣಿಯೂರು ಶ್ರೀಗಳು,ಬ್ಯಾಂಕ್ ಹಾಗೂ ಗ್ರಾಹಕರ ಪಾರದರ್ಶಕವಾದ ಸಂಬಂಧ ಇರಬೇಕು. ಗ್ರಾಹಕ ತಾನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ಭದ್ರತೆಗಾಗಿ ಬ್ಯಾಂಕ್‌ನಲ್ಲಿಡುತಿದ್ದು, ಅದರ ಸುರಕ್ಷತೆ ಪಾರದರ್ಶಕವಾಗಿರಬೇಕು. ವಿಶ್ವದಲ್ಲೇ ಭಾರತದ ಆರ್ಥಿಕತೆ ಸುದೃಢ ವಾಗಿರಲು ದೇಶದ ಬ್ಯಾಂಕಿಂಗ್ ವ್ಯವಸ್ಥೆ ಬಲಿಷ್ಠವಾಗಿರುವುದೇ ಕಾರಣ. ದೇಶದ ಬ್ಯಾಂಕುಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ಣಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಚಂದ್ರಶೇಖರ ರಾವ್ ಬಿ. ಮಾತನಾಡಿ, ಈ ವರ್ಷ ಬ್ಯಾಂಕಿನ 35 ಹೊಸ ಶಾಖೆಗಳನ್ನು ತೆರೆಯಲು ನಿರ್ಧರಿಸಿದ್ದು, ಅದರಲ್ಲಿ ಚಿಟ್ಪಾಡಿ ಶಾಖೆ ಮೊದಲನೆಯದು. ಈ ತಿಂಗಳ ಕೊನೆಯೊಳಗೆ ಒಟ್ಟು 10 ಹೊಸ ಶಾಖೆಗಳನ್ನು ತೆರೆಯಲಾಗುತ್ತದೆ. ಅಲ್ಲದೇ ಜೂನ್ ಅಂತ್ಯದೊಳಗೆ 35 ಹೊಸ ಶಾಖೆ ಕಾರ್ಯಾರಂಭ ಮಾಡಲಿವೆ ಎಂದರು.

ಕಳೆದ ವರ್ಷ ಬ್ಯಾಂಕ್ ತನ್ನ ಇತಿಹಾಸದಲ್ಲಿ ಹೊಸ ಮೈಲುಗಲ್ಲನ್ನು ದಾಟಿದ್ದು, ಸಣ್ಣ ಬ್ಯಾಂಕಿನಿಂದ ಮದ್ಯಮ ವರ್ಗದ ಬ್ಯಾಂಕಿಗೆ ಬಡ್ತಿ ಪಡೆದಿದೆ. ಕಳೆದ ವರ್ಷ ದ ಕೊನೆಗೆ ಬ್ಯಾಂಕಿನ ವಾರ್ಷಿಕ ವ್ಯವಹಾರ 1.10 ಲಕ್ಷ ಕೋಟಿ ರೂ.ದಾಟಿದ್ದು, ಈ ವರ್ಷ ಅದನ್ನು 1.30 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಇದೆ. ಇದಕ್ಕೆ ಎಲ್ಲರ ಸಹಕಾರ ಹಾಗೂ ಮಾರ್ಗದರ್ಶನದ ಅಗತ್ಯವಿದೆ ಎಂದರು.

2020ರ ಮಾರ್ಚ್ ತಿಂಗಳೊಳಗೆ ಬ್ಯಾಂಕಿನ 1000 ಶಾಖೆಗಳನ್ನುತೆರೆಯುವ ಗುರಿ ಇದೆ. ಕರ್ನಾಟಕದಲ್ಲಿ ನಮ್ಮ ಬ್ಯಾಂಕಿನ 463 ಶಾಖೆಗಳಿದ್ದು ಇವುಗಳಲ್ಲಿ 200ಕ್ಕೂ ಅಧಿಕ ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿವೆ. ರಾಜ್ಯದ ಪ್ರತಿ ಹಳ್ಳಿಯಲ್ಲಿ ನಮ್ಮ ಶಾಖೆಗಳನ್ನು ಕಾಣಬಹುದು. ಬ್ಯಾಂಕಿನ ಲಾಂಛನವನ್ನು ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತ ರಚಿಸಿದ್ದು, ಅದನ್ನು ಇಂದೂ ಉಳಿಸಿಕೊಳ್ಳಲಾಗಿದೆ ಎಂದು ಚಂದ್ರಶೇಖರ ರಾವ್ ತಿಳಿಸಿದರು.

ಆದ್ಯತಾ ರಂಗದಲ್ಲಿ ಕೃಷಿ ಹಾಗೂ ಎಂಎಸ್‌ಎಂಇ ಕ್ಷೇತ್ರಕ್ಕೆ ಶೇ.48ರಷ್ಟು ಸಾಲ ವನ್ನು ನೀಡುವ ಮೂಲಕ ಕರ್ಣಾಟಕ ಬ್ಯಾಂಕ್, ರಿಸರ್ವ್ ಬ್ಯಾಂಕ್ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ. ಬ್ಯಾಂಕಿಗೆ 1.30 ಲಕ್ಷ ಶೇರುದಾರರಿದ್ದು, 91 ಲಕ್ಷ ಗ್ರಾಹಕರನ್ನು ಹೊಂದಿದೆ. ಗ್ರಾಹಕರ ಸಂಖ್ಯೆಯನ್ನು ಶೀಘ್ರವೇ ಒಂದು ಕೋಟಿ ದಾಟಿಸುವ ಗುರಿ ಹೊಂದಲಾಗಿದೆ ಎಂದರು.

ಯಾವುದೇ ಹೊಸ ತಲೆಮಾರಿನ ಬ್ಯಾಂಕಿಗೆ ಕಡಿಮೆ ಇಲ್ಲದಂತೆ ಎಲ್ಲಾ ಸೌಲಭ್ಯಗಳನ್ನು ನಾವು ಗ್ರಾಹಕರಿಗೆ ಒದಗಿಸುತಿದ್ದೇವೆ ಎಂದು ಚಂದ್ರಶೇಖರ ರಾವ್ ತಿಳಿಸಿದರು. 

ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಯು.ವಿ.ಭಟ್, ಬ್ಯಾಂಕಿನ ಮಾಜಿ ನಿರ್ದೇಶಕ ಎ.ಜಿ.ಕೊಡ್ಗಿ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯ ಎಜಿಎಂ ಗೋಪಾಲಕೃಷ್ಣ ಸಾಮಗ ಬಿ. ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಶಾಖಾ ಮ್ಯಾನೇಜರ್ ರಾಜೇಶ್ ಪಿ.ಬಿ. ವಂದಿಸಿದರು. ಚೀಫ್ ಮ್ಯಾನೇಜರ್ ವಾದಿರಾಜ ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News