×
Ad

ಉಡುಪಿ: ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ

Update: 2018-05-10 21:56 IST

ಉಡುಪಿ, ಮೇ 10: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಗುರುವಾರ ಉಡುಪಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿರ್ತಿ ಗಂಗಾಧರ ಭಂಡಾರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಅವರ ಸಹಿತ ಬೆಂಬಲಿಗರೊಂದಿಗೆ ನಗರದಲ್ಲಿ ಮತಯಾಚನೆ ನಡೆಸಿದರು.

ಜೋಡುಕಟ್ಟೆಯಿಂದ ಮತಯಾಚನೆ ಆರಂಭಿಸಿದ ಬಿರ್ತಿ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಸಮೀಪದ ಮಾರುಕಟ್ಟೆ, ರಿಕ್ಷಾಸ್ಟಾಂಡ್, ಸಿಟಿ ಬಸ್‌ನಿಲ್ದಾಣದಲ್ಲಿ ಪಕ್ಷಕ್ಕೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಉಡುಪಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅಬ್ಬರದ ಪ್ರಚಾರ ಮಾಡಲಾಗಿದೆ. ಉಡುಪಿಯಲ್ಲಿ 2 ರಾಷ್ಟ್ರೀಯ ಪಕ್ಷಗಳ ಆಳ್ವಿಕೆಯಿಂದ ಜನ ಬೇಸತ್ತಿದ್ದು, ಜೆಡಿಎಸ್‌ಗೆ ಮತ ನೀಡುವ ಮನಸ್ಸು ಮಾಡಿದ್ದಾರೆ. ಜೆಡಿಎಸ್ ಆಳ್ವಿಕೆಗೆ ಬಂದರೆ ಸುವರ್ಣ ಕರ್ನಾಟಕ ನಿರ್ಮಾಣ ಗೊಳ್ಳುವ ಭರವಸೆ ನೀಡಿದರು.

ಜೆಡಿಎಸ್ ಅಭ್ಯರ್ಥಿ ಬಿರ್ತಿ ಗಂಗಾಧರ್ ಭಂಡಾರಿ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಕಾಂಗ್ರೆಸ್, ಬಿಜೆಪಿ ಆಳ್ವಿಕೆಯಲ್ಲಿ ಅಭಿವೃದ್ಧಿ ಕುಂಠಿತ ವಾಗಿದ್ದು, ಜನ ರೋಸಿ ಹೋಗಿದ್ದಾರೆ. ತನ್ನ 20 ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ರಾಜ್ಯಕ್ಕೆ ನೀಡಿರುವ ಮಾದರಿ ಆಳ್ವಿಕೆಯ ಬಗ್ಗೆ ಜನ ಉತ್ಸುಕ ರಾಗಿದ್ದು, ಈ ಬಾರಿ ಜೆಡಿಎಸ್ ಕೈಗೆ ಅಧಿಕಾರದ ಗದ್ದುಗೆ ನೀಡುವ ಸಂಪೂರ್ಣ ವಿಶ್ವಾಸವಿದೆ ಎಂದರು.

 ಜೆಡಿಎಸ್ ಕಾರ್ಯಾಧ್ಯಕ್ಷ ವಾಸುದೇವ್ ರಾವ್, ಉಡುಪಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಪ್ರದೀಪ್ ಜಿ., ಶಾಲಿನಿ ಶೆಟ್ಟಿ ಕೆಂಚನೂರು, ಸತೀಶ್, ರಾಜೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News