×
Ad

ಮಲ್ಪೆ: ನೀರಿನ ಹೊಂಡಕ್ಕೆ ಬಿದ್ದ ಮಗು ಮೃತ್ಯು; ಮತ್ತೊಂದು ಮಗು ಪಾರು

Update: 2018-05-10 23:18 IST

ಉಡುಪಿ, ಮೇ 10: ಕಾಲೇಜು ಕಟ್ಟಡ ನಿರ್ಮಾಣಕ್ಕೆಂದು ತೆಗೆದಿಟ್ಟ ಪಾಯದಲ್ಲಿ ಬುಧವಾರ ಸಂಜೆ ಸುರಿದ ಮಳೆಯಿಂದ ನೀರು ತುಂಬಿದ್ದು, ನಿಂತ ನೀರಲ್ಲಿ ಆಡಲೆಂದು ಇಳಿದ ಇಬ್ಬರು ಪುಟಾಣಿ ಮಕ್ಕಳ ಪೈಕಿ ಒಂದು ಮಗು ಮೃತಪಟ್ಟಿದ್ದು, ಇನ್ನೊಂದು ಮಗು ಚೇತರಿಸಿಕೊಳ್ಳುತ್ತಿರುವ ಘಟನೆ ಮಲ್ಪೆ ಠಾಣೆ ವ್ಯಾಪ್ತಿಯ ತೆಂಕನಿಡಿಯೂರಿನಲ್ಲಿ ಇಂದು ಸಂಜೆ ವೇಳೆ ನಡೆದಿದೆ.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕಾಗಿ ತೋಡಿದ ಅಡಿಪಾಯ ಗುಂಡಿಯಲ್ಲಿ ಈ ಘಟನೆ ಇಂದು ಸಂಜೆ 6:30ರಿಂದ 6:40ರ ನಡುವೆ ನಡೆದಿದೆ. ಕಾಲೇಜು ಪಕ್ಕದ ನಿವಾಸಿ ಮಾಲಿನಿ ಎಂಬವರ ಮೂರುವರೆ ವರ್ಷ ಪ್ರಾಯದ ರಾಘವೇಂದ್ರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವರ ತಂಗಿ ಪ್ರಫುಲ್ಲ ಅವರ ನಾಲ್ಕು ವರ್ಷ ಪ್ರಾಯದ ಪ್ರವೀಣ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಅಪಾಯದಿಂದ ಪಾರಾಗಿದೆ.

ಇಬ್ಬರು ಮಕ್ಕಳು ತೆಂಕನಿಡಿಯೂರು ಕೆಳಾರ್ಕಳಬೆಟ್ಟಿನ ನಿವಾಸಿಗಳು. ಮಕ್ಕಳು ಗುಂಡಿಯ ನೀರಿನಲ್ಲಿ ಬಿದ್ದಿರುವುದನ್ನು ನೋಡಿದ ಕಾಲೇಜಿನ ವಾಚ್‌ ಮ್ಯಾನ್ ತಕ್ಷಣವೇ ಇಬ್ಬರನ್ನು ನೀರಿನಿಂದ ಮೇಲಕ್ಕೆತ್ತಿದ್ದು, ಅಷ್ಟರಲ್ಲಿ ರಾಘವೇಂದ್ರ ಮೃತಪಟ್ಟಿದ್ದರೆನ್ನಲಾಗಿದೆ.

ಪ್ರತಿದಿನ ಸಂಜೆ ವೇಳೆ ಕಾಲೇಜಿನ ಮೈದಾನದಲ್ಲಿ ಯುವಕರು ಕಬ್ಬಡಿ ಆಟವಾಡುತ್ತಿದ್ದು, ಸ್ಥಳೀಯ ಮಕ್ಕಳು ಅದನ್ನು ನೋಡಲು ಬರುತ್ತಿದ್ದರು. ನಿನ್ನೆ ಮಳೆ ಬಂದ ಕಾರಣ ಇಂದು ಯುವಕರು ಕಬ್ಬಡಿ ಆಡಲು ಬಂದಿರಲಿಲ್ಲ. ಆದರೆ ಈ ಮಕ್ಕಳು ನಾಲ್ಕು ಗಂಟೆಯಿಂದ ಮೂರ್ನಾಲ್ಕು ಬಾರಿ ಮೈದಾನಕ್ಕೆ ಬಂದಿದ್ದು, ವಾಚ್‌ ಮ್ಯಾನ್ ಅವರನ್ನು ವಾಪಾಸು ಕಳುಹಿಸಿದ್ದರೆನ್ನಲಾಗಿದೆ.

ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಪಾಯಕ್ಕಾಗಿ ತೋಡಿದ ಗುಂಡಿಯಲ್ಲಿ ನೀರು ನಿಂತಿತ್ತು. ವಾಚ್‌ ಮ್ಯಾನ್ ಕಾಲೇಜಿನ ಹಿಂಭಾಗದ ಗೇಟು ಹಾಕಲೆಂದು ಹೋಗಿದ್ದ ಹೊತ್ತಿನಲ್ಲಿ ಮತ್ತೆ ಕಾಲೇಜಿನ ಆವರಣಕ್ಕೆ ಬಂದ ಮಕ್ಕಳು ಗುಂಡಿಯ ನೀರಿನಲ್ಲಿ ಆಟವಾಡಲೆಂದು ಇಳಿದಿದ್ದು, ನೀರಿನಲ್ಲಿ ಮುಳುಗಿದ್ದರು. ಕೆಲವೇ ಕ್ಷಣದಲ್ಲಿ ಎದುರಿನ ಗೇಟು ಹಾಕಲು ಬರುವಾಗ ಮಕ್ಕಳು ನೀರಿನಲ್ಲಿ ಬಿದ್ದುಕೊಂಡಿರುವುದು ಕಂಡಿದ್ದು, ಅವರು ತಕ್ಷಣವೇ ಮಕ್ಕಳನ್ನು ಮೇಲೆ ಎತ್ತಿದ್ದು, ಓರ್ವನನ್ನು ಉಳಿಸಿದ್ದಾರೆ ಎಂದು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News