ಉಡುಪಿ: ಮತದಾರರನ್ನು ಆಕರ್ಷಿಸಲು ಸಿಂಗಾರಗೊಂಡ ಪಿಂಕ್ ಮತಗಟ್ಟೆಗಳು
ಉಡುಪಿ, ಮೇ 11: ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಒಟ್ಟು 10 ಪಿಂಕ್ ಮತಗಟ್ಟೆಗಳೆಂದು ಸ್ಥಾಪಿಸಲಾಗಿದ್ದು, ಇದೀಗ ಎಲ್ಲವೂ ಪಿಂಕ್‌ಮಯವಾಗಿ ಶೃಂಗಾರಗೊಂಡಿರುವ ಈ ಮತಗಟ್ಟೆಗಳು ಮತದಾರರನ್ನು ಆಕರ್ಷಿಸುತ್ತಿವೆ.
ಎಲ್ಲ ಪಿಂಕ್ ಮತಗಟ್ಟೆಗಳು ಬಲೂನ್, ತಳಿರುತೋರಣ, ಫ್ಲೆಕ್ಸ್‌ಗಳಿಂದ ಪಿಂಕ್ ಬಣ್ಣದಿಂದ ಕಂಗೊಳಿಸುತ್ತಿದ್ದು, ಮತಗಟ್ಟೆಗಳ ಗೋಡೆಗಳಿಗೆ ಪಿಂಕ್ ಬಣ್ಣ ಹಚ್ಚ ಲಾಗಿದೆ. ನೆಲಕ್ಕೆ ಪಿಂಕ್ ಬಣ್ಣದ ನೆಲಹಾಸು ಕೂಡ ಹಾಕಲಾಗಿದೆ. ಅಲ್ಲದೆ ಟೇಬಲ್, ಕುರ್ಚಿ ಹಾಗೂ ಮತಯಂತ್ರಕ್ಕೆ ಅಡ್ಡಲಾಗಿ ಇಟ್ಟಿರುವ ರಟ್ಟು ಕೂಡ ಪಿಂಕ್‌ಮಯವಾಗಿದೆ. ಇಲ್ಲಿ ನಿಯೋಜಿಸಿರುವ ಎಲ್ಲ ಸಿಬ್ಬಂದಿಗಳು ಕೂಡ ಪಿಂಕ್ ಬಣ್ಣದ ಉಡುಪು ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮಹಿಳಾ ಮತದಾರರ ಸಂಖ್ಯೆ ಶೇ.50ಕ್ಕಿಂತಲೂ ಅಧಿಕವಿರುವ ಮತಗಟ್ಟೆ ಗಳನ್ನು ಪಿಂಕ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಚುನಾವಣಾಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿಗಳು ಮಹಿಳೆಯರೇ ಆಗಿರು ತ್ತಾರೆ. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇದಿಂದ ಈ ಕಲ್ಪನೆಯನ್ನು ಅಳವಡಿಸಿದೆ.
ಬೈಂದೂರು ಕ್ಷೇತ್ರದ ಶಿರೂರು ಗ್ರಾಪಂ ಕಚೇರಿಯಲ್ಲಿ 396 ಮಹಿಳಾ ಮತದಾರರು, ಕುಂದಾಪುರ ವಡೇರಹೋಬಳಿ ಪಿ.ವಿ.ಎಸ್ ಸರೋಜಿನಿ ಮಧು ಸೂದನ ಕುಶೆ ಸರಕಾರಿ ಪ್ರೌಡಶಾಲೆಯಲ್ಲಿ 552 ಮಹಿಳಾ ಮತದಾರರು, ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿನ ಒಟ್ಟು 3 ಮತಗಟ್ಟೆಗಳಲ್ಲಿ 1247 ಮಹಿಳಾ ಮತದಾರರು, ಕನ್ನರ್ಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಉತ್ತರ ಭಾಗದ ಮತಗಟ್ಟೆಯಲ್ಲಿ 546 ಮಹಿಳಾ ಮತದಾರರು ಹಾಗೂ ದಕ್ಷಿಣ ಭಾಗದ ಮತಗಟ್ಟೆಯಲ್ಲಿ 356 ಮಹಿಳಾ ಮತದಾರರು, ಕಾಪು ಕ್ಷೇತ್ರದ ಕುರ್ಕಾಲು ಗ್ರಾಪಂ ಕಚೇರಿ ಮತಗಟ್ಟೆಯಲ್ಲಿ 648 ಮಹಿಳಾ ಮತ ದಾರರು, ಕಾರ್ಕಳ ಕ್ಷೇತ್ರದ ಪೆರ್ವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉತ್ತರ ಭಾಗದ ಮತಗಟ್ಟೆಯಲ್ಲಿ 665 ಹಾಗೂ ದಕ್ಷಿಣ ಭಾಗದ ಮತಗಟ್ಟೆ ಯಲ್ಲಿ 553 ಮಹಿಳಾ ಮತದಾರರಿದ್ದು, ಇಲ್ಲಿ ಈ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರ್ರಾನ್ಸಿಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಇಂದು ಕುರ್ಕಾಲು ಗ್ರಾಪಂ ಕಚೇರಿಯಲ್ಲಿ ಸ್ಥಾಪಿಸಿರುವ ಪಿಂಕ್ ಮತಗಟ್ಟೆ ಸೇರಿದಂತೆ ಇತರ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.