ಪುತ್ತೂರು: ಲಾರಿ-ಜೀಪು ಢಿಕ್ಕಿ: ಓರ್ವ ಮೃತ್ಯು, ನಾಲ್ವರಿಗೆ ಗಾಯ
ಪುತ್ತೂರು, ಮೇ 11: ನಿಲ್ಲಿಸಿದ್ದ ಲಾರಿಯೊಂದಕ್ಕೆ ಹಿಂದಿನಿಂದ ಜೀಪು ಢಿಕ್ಕಿ ಹೊಡೆದು ಓರ್ವ ಮಹಿಳೆ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ಪುತ್ತೂರು ನಗರದ ದರ್ಬೆ ನಿರೀಕ್ಷಣಾ ಮಂದಿರದ ಬಳಿಯಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಾಣಿಕೆ ನಿವಾಸಿ ದಿ. ವೆಂಕಪ್ಪ ಗೌಡರ ಪತ್ನಿ ನಿವೃತ್ತ ಶಿಕ್ಷಕಿ ವೇದಾವತಿ (78) ಮೃತಪಟ್ಟ ಮಹಿಳೆ.
ಮೃತ ವೇದಾವತಿ ಅವರ ಪುತ್ರ ಜೀಪು ಚಾಲಕ ಪುತ್ತೂರು ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಸಿಬಂದಿ ಬಾಲಕೃಷ್ಣ ಎಂಬವರಿಗೆ ಎದೆಯ ಭಾಗಕ್ಕೆ ಗಾಯ ಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಮೂವರು ಮಕ್ಕಳು ಅಪಾಯದಿಂದ ಪಾರಾಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ವೇದಾವತಿ ಅವರ ಪುತ್ರಿಯನ್ನು ವೇಣೂರಿಗೆ ವಿವಾಹ ಮಾಡಿ ಕೊಡಲಾಗಿದ್ದು, ಪುತ್ರಿಯ ಮನೆಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಅವರು ರಾತ್ರಿ ಹಿಂತಿರುಗಿ ಮನೆಗೆ ಆಗಮಿಸುತ್ತಿರುವಾಗ ಈ ಘಟನೆ ನಡೆದಿದೆ. ಢಿಕ್ಕಿಯಿಂದ ಜೀಪಿನ ಮುಂಬಾಗ ನಜ್ಜುಗುಜ್ಜಾಗಿದೆ.
ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ಸೇರಿಸಿದ ಅಭ್ಯರ್ಥಿ: ರಾತ್ರಿ ಒಂದು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ ಸಂದರ್ಭ ಅದೇ ರಸ್ತೆಯಾಗಿ ಮತಯಾಚನೆ ಮುಗಿಸಿಕೊಂಡು ಬರುತ್ತಿದ್ದ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಗಾಯಾಳುಗಳನ್ನು ಸಂತೈಸಿ, ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಿ ವ್ಯವಸ್ಥೆಗೊಳಿಸಿದರು. ಜೊತೆಗೆ ತಮ್ಮ ವಾಹನದಲ್ಲೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಸಿದರು. ತಡರಾತ್ರಿ ಘಟನೆ ನಡೆದಿರುವುದರಿಂದ ಜನಸಂಚಾರ ಮತ್ತು ವಾಹನ ಸಂಚಾರಗಳಿಲ್ಲದ ಕಾರಣ ಗಾಯಾಳು ಬಾಲಕೃಷ್ಣ ಅವರು ತನ್ನ ತಾಯಿಯನ್ನು ಎತ್ತಿ ಹಿಡಿದುಕೊಂಡಿದ್ದರು. ಮಕ್ಕಳು ಕುರುಚಾಡುತ್ತಿದ್ದರು. ಅದೇ ದಾರಿಯಾಗಿ ನಾವು ವಾಹನದಲ್ಲಿ ಬರುತ್ತಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದ್ದೇವೆ ಎಂದು ಸಂಜೀವ ಮಠಂದೂರು ತಿಳಿಸಿದ್ದಾರೆ.