×
Ad

ಎಸೆಸೆಲ್ಸಿ: ತುಳು ಭಾಷಾ ವಿದ್ಯಾರ್ಥಿಗಳಿಂದ ಶೇ.100 ಫಲಿತಾಂಶ

Update: 2018-05-11 21:57 IST

 ಮಂಗಳೂರು, ಮೇ 11: ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಎಸೆಸೆಲ್ಸಿ ಪರೀಕ್ಷೆ ಬರೆದ 416 ವಿದ್ಯಾರ್ಥಿಗಳೆಲ್ಲರೂ ಪಾಸಾಗಿದ್ದು ಶೇ.100 ಫಲಿತಾಂಶ ದಾಖಲಿಸಿದ್ದಾರೆ.

ದ.ಕ ಜಿಲ್ಲೆಯ 35 ಶಾಲೆಗಳಲ್ಲಿ 8,9, 10ನೇ ತರಗತಿಗಳಲ್ಲಿ ತುಳು ಭಾಷೆಯ ಪಠ್ಯ ಕಲಿಸಲಾಗುತ್ತಿದೆ. ಈ ಪೈಕಿ 22 ಶಾಲೆಗಳ 10ನೇ ತರಗತಿಯ 416 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದು, ಆ ಪೈಕಿ 89 ಮಕ್ಕಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. 24 ಮಂದಿ 99 ಅಂಕ ಪಡೆದಿದ್ದಾರೆ. 107 ವಿದ್ಯಾರ್ಥಿಗಳು 90ರಿಂದ 98 ಅಂಕ ಪಡೆದು ದಾಖಲೆ ನಿರ್ಮಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಮಕ್ಕಳಲ್ಲಿ ಶೇ. 50 ಮಕ್ಕಳು O+ ಶ್ರೇಣಿ ಪಡೆದಿದ್ದಾರೆ.

ತುಳುವಿನಲ್ಲಿ ಶೇ.100 ಫಲಿತಾಂಶ ಬರುವ ಮೂಲಕ ಶಾಲೆಗಳ ಫಲಿತಾಂಶ ಹಾಗೂ ಜಿಲ್ಲೆಯ ಫಲಿತಾಂಶದಲ್ಲಿ ಏರಿಕೆಯಾಗಿರುವುದು ಕಂಡು ಬರುತ್ತದೆ. ಇದಕ್ಕೆ ಕಾರಣರಾದ ದ.ಕ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಗಳ ಮುಖ್ಯ ಶಿಕ್ಷಕರು, ತುಳು ಭಾಷಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದ್ದಾರೆ.

ಪ್ರಸಕ್ತ (2018-19ನೇ) ಸಾಲಿನಲ್ಲಿ 100ಕ್ಕೂ ಅಧಿಕ ಶಾಲೆಗಳಲ್ಲಿ ತುಳು ಪಠ್ಯವನ್ನು ಭೋದನೆ ಮಾಡಲು ಕ್ರಮವಹಿಸಲಾಗಿದೆ. ತೃತೀಯ ಐಚ್ಛಿಕ ಭಾಷೆಯಾಗಿ ತುಳುವನ್ನು ಆಯ್ಕೆ ಮಾಡುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತಿದ್ದು, ಈ ಮೂಲಕ ಶಾಲೆಗಳು ಕೂಡಾ ಫಲಿತಾಂಶದಲ್ಲಿ ದಾಖಲೆ ನಿರ್ಮಿಸುತ್ತಿದೆ ಎಂದು ಎ.ಸಿ ಭಂಡಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News