ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಚಂದ್ರಶೇಖರ ರಾವ್, ಪ್ರೊ.ಎಂ.ಎ.ಹೆಗಡೆ ಆಯ್ಕೆ
ಉಡುಪಿ, ಮೇ 11: ಉಡುಪಿಯ ಯಕ್ಷಗಾನ ಕಲಾರಂಗ ಕಳೆದ ಹಲವು ವರ್ಷಗಳಿಂದ ಯಕ್ಷಗಾನ ಅರ್ಥಧಾರಿಗಳಿಗೆ ನೀಡುತ್ತಾ ಬಂದಿರುವ ಮಟ್ಟಿ ಮುರುಳೀಧರ ರಾವ್ ಮತ್ತು ಪೆರ್ಲ ಕೃಷ್ಣ ಭಟ್ ಹೆಸರಿನ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಅನುಕ್ರಮವಾಗಿ ಹಿರಿಯ ಅರ್ಥಧಾರಿಗಳಾದ ಚಂದ್ರಶೇಖರ ರಾವ್ ಬಿ. ಮತ್ತು ಪ್ರೊ.ಎಂ.ಎ.ಹೆಗಡೆ ಆಯ್ಕೆಯಾಗಿದ್ದಾರೆ.
ಮೇ 27ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಸಂಸ್ಥೆಯ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ಶ್ರೀಪಾದರು ಈ ಇಬ್ಬರು ಹಿರಿಯ ಕಲಾವಿದರಿಗೆ ತಲಾ 20,000 ರೂ. ನಗದು ಪುರಸ್ಕಾರವನ್ನೊಳ ಗೊಂಡ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ಯಕ್ಷಗಾಲ ಕಲಾರಂಗ ಅಧ್ಯಕ್ಷ ಕೆ.ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಚಯ: 84ರ ಹರೆಯದ ಚಂದ್ರಶೇಖರ ರಾವ್ ಬಿ. ಅಧ್ಯಾಪಕರಾಗಿ ನಿವೃತ್ತರು. 1960-2005ರ ಅವಧಿಯಲ್ಲಿ ಓರ್ವ ಪ್ರಮುಖ ಅರ್ಥಧಾರಿ, ಸಂಘಟಕ ರಾಗಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಕಾಸರಗೋಡು ಪ್ರದೇಶ ಗಳಲ್ಲಿ ಸಕ್ರೀಯರಾಗಿ ಕಲಾ ಪ್ರಸಾರಕ್ಕೆ ಕಾರಣರಾದವರು. ಕಲಾವಿಕಾಸ ಸಂಘ ಮಂಚಿ ಇದರ ಸ್ಥಾಪಕರಾಗಿ ಮೂವತ್ತು ವರ್ಷ ತಾಳಮದ್ದಳೆಗಳನ್ನು ನಡೆಸಿ ಕೊಟ್ಟವರು. ಶೇಣಿಗೋಪಾಲಕೃಷ್ಣ ಭಟ್, ಮಲ್ಪೆ ಶಂಕರನಾರಾಯಣ ಸಾಮಗ, ಪೆರ್ಲ ಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ಮೊದಲಾದ ಹಿರಿಯ ಅರ್ಧಾರಿಗಳೊಂದಿಗೆ ಬಾಗವಹಿಸಿದವರು.
ಚೊಕ್ಕ ಭಾಷೆ, ಸಂಭಾಷಣಾ ವಿಧಾನ, ಪ್ರಸಂಗದ ಮೇಲಿನ ಹಿಡಿತ ತಿಳಿ ಹಾಸ್ಯಗಳಿಂದ ತಾಳಮದ್ದಳೆ ಕಳೆಗಟ್ಟಲು ಕಾರಣರಾದವರು. ಹೆಚ್ಚಾಗಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತಿದ್ದ ಇವರು ಹಲವಾರು ಪೌರಾಣಿಕ ಪಾತ್ರಗಳನ್ನು ಸುಂದರವಾಗಿ ನಿರೂಪಿಸಿದವರು.
ಪ್ರೊ.ಎಂ.ಎ.ಹೆಗಡೆ: ಸಂಸ್ಕೃತ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತ ರಾದ ಪ್ರೊ.ಎಂ.ಎ.ಹೆಗಡೆ ಹಿರಿಯ ವಿದ್ವಾಂಸ, ಲೇಖಕ, ಅರ್ಥಧಾರಿ, ಪ್ರಸಂಗಕರ್ತ, ಹವ್ಯಾಸಿಯಕ್ಷಗಾನ ಕಲಾವಿದರು. ಪ್ರಸಕ್ತ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೇಖಕರಾಗಿ ಸಂಸ್ಕೃತ ದಲ್ಲಿರುವ ಮಿಮಾಂಸೆ-ತತ್ವಶಾಸ್ತ್ರವನ್ನು ಕನ್ನಡಕ್ಕೆ ಕೊಟ್ಟವರು. ರಾಜಾ ಕರಂದಮ, ಲವಕುಶ ಮೊದಲಾದ ಉತ್ತಮ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.
ಇಡಗುಂಜಿ ಮೇಳದಲ್ಲಿ ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ ಮೊದಲಾದ ಯಕ್ಷಗಾನ ಮೇರು ಕಲಾವಿದರೊಂದಿಗೆ ವೇಷ ಮಾಡಿ ಸೈ ಎನಿಸಿಕೊಂಡವರು. ತಾಳಮದ್ದಳೆ ಅರ್ಥಧಾರಿಯಾಗಿ ಅನೇಕ ಪೌರಾಣಿಕ ಪಾತ್ರಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಸಂವಾದ ಕೌಶಲ ಸಂದರ್ಬೋಚಿತ ಮಾತುಗಾರಿಕೆಯಿಂದ ಕಲಾರಸಿಕರ ಮನಗೆದ್ದವರು. ಯಕ್ಷಗಾನ ವಿದ್ವಾಂಸರಾಗಿ, ವಿಮರ್ಶಕರಾಗಿ ಪರಿಚಿತರು.