ಹೊಸ ಅನುಭವ, ಖುಷಿ ನೀಡಿದೆ: ದ.ಕ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಸ್‌ಎಫ್ ಯೋಧರು
ಮಂಗಳೂರು, ಮೇ 12: ದ.ಕ.ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಯಲು ಚುನಾವಣಾ ಆಯೋಗವು ಜಿಲ್ಲೆ, ರಾಜ್ಯ ಪೊಲೀಸರಲ್ಲದೆ ಹೊರ ರಾಜ್ಯದ ವಿವಿಧ ಪಡೆಗಳನ್ನೂ ತರಿಸಿಕೊಂಡಿದೆ. ಆ ಪೈಕಿ ಬಿಎಸ್‌ಎಫ್ (ಗಡಿ ಭದ್ರತಾ ಪಡೆ)ನ ಯೋಧರು ಕೂಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆ ಪೈಕಿ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಸರಕಾರಿ ಹಿರಿಯ ಮಾದರಿ ಶಾಲೆಯ ಮತಗಟ್ಟೆಯಲ್ಲಿ ಮೂವರು ಬಿಎಸ್‌ಎಫ್ ಯೋಧರು ಕರ್ತವ್ಯ ನಿರ್ವಹಿಸುತಿದ್ದಾರೆ. ಶನಿವಾರ ಬೆಳಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಹರಿಯಾಣ ಮೂಲದ ಪ್ರಸ್ತುತ ಹೊಸದಿಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿಎಸ್‌ಎಫ್ ಯೋಧ ಕಿತಾಬ್ ಸಿಂಗ್ ‘ಗಡಿ ಕಾಯುವುದು ಮಾತ್ರ ದೇಶ ಸೇವೆಯಲ್ಲ, ಮತದಾನ ಪ್ರಕ್ರಿಯೆಯಲ್ಲೂ ಕೂಡ ತೊಡಗಿಸಿಕೊಳ್ಳುವುದು ದೇಶ ಸೇವೆಯೇ ಆಗಿದೆ. ಹೊಸದಿಲ್ಲಿಗೂ-ಮಂಗಳೂರಿಗೂ ವಾತಾವರಣದಲ್ಲಿ ವ್ಯತ್ಯಾಸವಿದೆ. ಹಾಗಂತ ನಾವು ಹತಾಶರಾಗಿಲ್ಲ. ಇಲ್ಲಿನ ಜನರು ತುಂಬಾ ಒಳ್ಳೆಯವರು. ಎಲ್ಲಾ ರೀತಿಯ ಸಹಕಾರ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕೂಡ ನಮಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದೆ. ಇದೇ ಮೊದಲ ಬಾರಿಗೆ ತಾನು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಹೊಸ ಅನುಭವವನ್ನೂ ನೀಡುತ್ತಿದೆ’ ಎಂದರು.