×
Ad

ದ.ಕ.ಜಿಲ್ಲೆಯ ವಿವಿಧೆಡೆ ಅನಿವಾಸಿ ಭಾರತೀಯರಿಂದ ಮತದಾನ

Update: 2018-05-12 13:10 IST
ಅನ್ಸಾರ್ ತೋನ್ಸೆ ಶೇಖ್

ಮಂಗಳೂರು, ಮೇ 12: ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿಸಲ್ಪಟ್ಟ ರಾಜ್ಯ ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ನೂರಾರು ಅನಿವಾಸಿ ಭಾರತೀಯರು ಜಿಲ್ಲೆಯ ವಿವಿಧ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನಗೈದು ಗಮನ ಸೆಳೆದರು. ಮತದಾನ ಮಾಡಲೆಂದೇ ಈ ಅನಿವಾಸಿ ಭಾರತೀಯರು ಕಳೆದ ಎರಡ್ಮೂರು ದಿನದಿಂದ ತವರೂರಿಗೆ ಆಗಮಿಸಿರುವುದು ವಿಶೇಷ.

ಈ ಬಾರಿಯ ಚುನಾವಣೆಯು ಜಾತ್ಯತೀತ ಶಕ್ತಿಗಳ ಮತ್ತು ಹಿಂದುತ್ವವಾದಿ ಶಕ್ತಿಗಳ ಮಧ್ಯೆ ನಡೆಯುವ ಹಣಾಹಣಿ ಎಂದು ಬಿಂಬಿಸಲ್ಪಟ್ಟ ಕಾರಣ ಗಲ್ಫ್ ರಾಷ್ಟ್ರಗಳಲ್ಲದೆ ವಿವಿಧ ದೇಶಗಳಲ್ಲಿ ನೆಲೆಸಿರುವವರನ್ನು ತವರೂರಿಗೆ ಕರೆಸಿಕೊಂಡು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನವು ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ನೇತೃತ್ವದಲ್ಲಿ ನಡೆದಿತ್ತು. ಅದರಂತೆ ವಿದೇಶದಲ್ಲಿ ನೆಲೆಸಿರುವ ಉದ್ಯಮಿಗಳು, ಉದ್ಯೋಗಿಗಳು ತವರೂರಿಗೆ ಆಗಮಿಸಿ ಮತದಾನ ಮಾಡಿದ್ದಾರೆ.

ಸಾವಿರಾರು ಅನಿವಾಸಿ ಭಾರತೀಯರು ಕರಾವಳಿ ಜಿಲ್ಲೆಗಳಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ. ಈವರೆಗೆ ಹೆಚ್ಚಿನವರು ಮತದಾನ ಪ್ರಕ್ರಿಯೆಯಿಂದ ದೂರು ಸರಿಯುತ್ತಿದ್ದರು. ಆದರೆ ಈ ಬಾರಿಯ ಚುನಾವಣೆಯು ಅಭಿವೃದ್ಧಿ ಮತ್ತು ಹಿಂದುತ್ವದ ಮಧ್ಯೆ ನಡೆಯುವ ಸಾಧ್ಯತೆಯನ್ನು ಮನಗಂಡ ಅನಿವಾಸಿ ಭಾರತೀಯರು ತವರೂರಿಗೆ ಆಗಮಿಸಿ ಬಲು ಖುಷಿಯಿಂದಲೇ ಮತ ಚಲಾಯಿಸಿದ್ದಾರಲ್ಲದೆ, ತಮ್ಮ ಕುಟುಂಬದ ಸರ್ವರನ್ನೂ ಮತದಾನ ಕೇಂದ್ರದತ್ತ ಕರೆದೊಯ್ಯುತ್ತಿದ್ದಾರೆ. ಅಲ್ಲದೆ ಮತದಾನ ಪ್ರಕ್ರಿಯೆಯಿಂದ ದೂರ ಸರಿದವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ವಿದೇಶದಲ್ಲಿ ಉದ್ಯೋಗದಲ್ಲಿರುವ ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರಾದ ಮುಹಮ್ಮದ್ ಸಲೀಂ ಗುಲಾಂ ನಬಿ ಇಂದು ಮತದಾನಕ್ಕಾಗಿ ತವರಿಗೆ ಆಗಮಿಸಿದ್ದರು. ಉಡುಪಿಯ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರು ಮತ ಚಲಾಯಿಸಿದರು.


ಮುಹಮ್ಮದ್ ಸಲೀಂ ಗುಲಾಂ ನಬಿ

ಮತದಾನದ ಬಗ್ಗೆ ನಿರ್ಲಕ್ಷ ಬೇಡ

ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉಪ್ಪೂರು ಸಮೀಪದ ಕೊಳಲಗಿರಿ ನಿವಾಸಿ ಅನ್ಸಾರ್ ತೋನ್ಸೆ ಶೇಖ್ ದುಬೈಯ ಉದ್ಯೋಗಿ. ಕೆಲವು ದಿನಗಳ ಹಿಂದೆ ಊರಿಗೆ ಬಂದಿದ್ದ ಅವರು ಇಷ್ಟರಲ್ಲೇ ಮರಳಿ ಕೆಲಸಕ್ಕೆ ಹಾಜರಾಗಬೇಕಿತ್ತು. ಈ ಮಧ್ಯೆ ಮತದಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಮನದಟ್ಟುಮಾಡಿಕೊಂಡು ಒಂದೆರೆಡು ದಿನ ತಡವಾದರೂ ಪರವಾಗಿಲ್ಲ. ಮತ ಚಲಾಯಿಸಿಯೇ ಹೋಗಲು ನಿರ್ಧರಿಸಿದರು. ಅದರಂತೆ ಶನಿವಾರ ತನ್ನ ಕುಟುಂಬಸ್ಥರೊಂದಿಗೆ ತೆಂಕಬೆಟ್ಟು ಹಿ.ಪ್ರಾ.ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅನ್ಸಾರ್ ತೋನ್ಸೆ ಶೇಖ್ ‘ಮತದಾನ ನಮ್ಮ ಹಕ್ಕು. ಮತ ಚಲಾಯಿಸದೆ ನಿರ್ಲಕ್ಷ್ಯ ತಾಳುವುದು ಸರಿಯಲ್ಲ. ನನ್ನೊಂದು ಮತದಿಂದ ಏನಾಗಬೇಕು ಎಂಬ ಭಾವನೆಯನ್ನು ತೊಡೆದು ಹಾಕಿ ಸರ್ವರೂ ಮತದಾನದಲ್ಲಿ ಪಾಲ್ಗೊಂಡರೆ ನಮಗೆ ಬೇಕಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು. ಆ ಅವಕಾಶವನ್ನು ಕಳಕೊಳ್ಳಬಾರದು ಎಂಬ ನಿಟ್ಟಿನಲ್ಲಿ ನಾನು ಮತ ಚಲಾಯಿಸಿಯೇ ದುಬೈಗೆ ಮರಳಲು ಕೊನೆಯ ಕ್ಷಣದಲ್ಲಿ ನಿರ್ಧರಿಸಿದೆ. ಅದರಂತೆ ಶನಿವಾರ ಮತಚಲಾಯಿಸಿದ್ದು, ತುಂಬಾ ಖುಷಿಯಾಯಿತು’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News