ದ.ಕ.ಜಿಲ್ಲೆಯಲ್ಲಿ ಗಮನ ಸೆಳೆದ 20 ‘ಪಿಂಕ್’ ಮತಗಟ್ಟೆಗಳು
ಮಂಗಳೂರು, ಮೇ 12: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 20 ಮತಗಟ್ಟೆಗಳಲ್ಲಿ ‘ಪಿಂಕ್’ ಗಮನ ಸೆಳೆದಿದೆ. ಅಂದರೆ ಶನಿವಾರ ಮುಂಜಾನೆಯೇ ಈ ಮತದಾನ ಕೇಂದ್ರಕ್ಕೆ ತೆರಳಿದಾಗ ಪಿಂಕ್ ಬಣ್ಣದ ಉಡುಪು ಧರಿಸಿರುವ ಮಹಿಳಾ ಸಿಬ್ಬಂದಿ ವರ್ಗವು ‘ಮತದಾನ ಕೇಂದ್ರಕ್ಕೆ ಬನ್ನಿ ಎಂದು ನಗುಮುಖದಿಂದಲೇ ಸ್ವಾಗತ ಕೋರುತ್ತಿರುವುದು ವಿಶೇಷವಾಗಿದೆ.
ಈ 20 ಮತಗಟ್ಟೆ ತುಂಬಾ ‘ಪಿಂಕ್’ ಬಣ್ಣ ಕಾಣಿಸುತ್ತಿವೆ. ಮಹಿಳಾ ಸಶಸ್ತ್ರೀಕರಣದ ಸಂಕೇತವಾಗಿರುವ ಈ ಮತಗಟ್ಟೆಗಳಲ್ಲಿ ಪಿಂಕ್ ಬಣ್ಣದ ಬಲೂನ್ ಹಾಗೂ ಪಿಂಕ್ ಬಣ್ಣದ ಬಟ್ಟೆಯನ್ನೂ ಕಟ್ಟಿರುವುದು ಕೂಡ ವಿಶೇಷ. ಮತದಾರರನ್ನು ಆಕರ್ಷಿಸಲ್ಪಡುತ್ತಿರುವ ಈ ಮತಗಟ್ಟೆಗಳ ದ್ವಾರಗಳಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವೂ ನಡೆದಿದೆ. ಅದಲ್ಲದೆ ಇವಿಎಂ ಮತಯಂತ್ರ, ಮೇಜು, ಕುರ್ಚಿ ಕೂಡ ಪಿಂಕ್‌ಮಯವಾಗಿದೆ.
ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ ಹಾಗೂ ಮಂಗಳೂರು ಕ್ಷೇತ್ರದಲ್ಲಿ ತಲಾ 5 ಹಾಗೂ ಬೆಳ್ತಂಗಡಿ, ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯದಲ್ಲಿ ತಲಾ ಒಂದೊಂದು ಮಹಿಳಾ ಸ್ನೇಹಿ ಮತಗಟ್ಟೆ ತೆರೆಯಲಾಗಿದ್ದು, ಯುವತಿಯರು, ಮಹಿಳೆಯರು ತುಂಬಾ ಖುಷಿಯಿಂದ ಮತ ಚಲಾಯಿಸುತ್ತಿರುವುದು ಕಂಡು ಬಂತು.
ಈ ಮಧ್ಯೆ ನಗರ ಬಲ್ಮಠ ಸಮೀಪದ ಸರಕಾರಿ ಶಾಲೆಯ ಮತಗಟ್ಟೆಯೊಂದರಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಯುವತಿಯೊಬ್ಬಳು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿ ‘ಸಮಾನತೆಗಾಗಿ ಹೋರಾಡುವ ಈ ಸಂದರ್ಭದಲ್ಲಿ ಮಹಿಳಾ ಮತದಾರರನ್ನು ಪ್ರತ್ಯೇಕಿಸುವ ಪ್ರಯತ್ನ ಸರಿಯಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.