ದ.ಕ.ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ಕೈ ಕೊಟ್ಟ ‘ಇವಿಎಂ’ ಮತಯಂತ್ರ
ಮಂಗಳೂರು, ಮೇ 12: ದ.ಕ.ಜಿಲ್ಲೆಯ ವಿವಿಧ ಕಡೆ ‘ಇವಿಎಂ’ ಮತಯಂತ್ರ ಕೈಗೊಟ್ಟ ಬಗ್ಗೆ ವರದಿಯಾಗಿದ್ದು, ಇದರಿಂದ ಮತದಾನ ಪ್ರಕ್ರಿಯೆಯಲ್ಲಿ 10, 15 ನಿಮಿಷವಲ್ಲದೆ ಅರ್ಧ ಗಂಟೆಯವರೆಗೂ ವಿಳಂಬವಾಗಿದೆ. ಮೊದಲೇ ‘ಇವಿಎಂ’ ಮತಯಂತ್ರದ ಬಗ್ಗೆ ಅಸಮಾಧಾನದಿಂದಿದ್ದ ಮತದಾರರು ಕೆಲವು ಕಡೆ ಆಕ್ರೋಶಿತರಾಗಿ ಮತಗಟ್ಟೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.
ನಗರದ ಕಪಿತಾನಿಯೋ ಶಾಲೆಯಲ್ಲಿ ‘ಇವಿಎಂ’ ಮತಯಂತ್ರ ಕೈಕೊಟ್ಟ ಕಾರಣ ಕೆಲಕಾಲ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಸರತಿ ಸಾಲಿನಲ್ಲಿ ನಿಂತ ಮತದಾರರು ಇದರಿಂದ ಆಕ್ರೋಶಿತರಾದರು. ವಿಷಯ ತಿಳಿದ ಶಾಸಕ ಜೆ.ಆರ್.ಲೋಬೊ ಸ್ಥಳಕ್ಕೆ ತೆರಳಿ ವಸ್ತುಸ್ಥಿತಿ ತಿಳಿದುಕೊಂಡರಲ್ಲದೆ, ಸಮಸ್ಯೆ ಬಾರದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು.
ಬೆಂಗರೆಯ 3 ಮತಗಟ್ಟೆಗಳಲ್ಲೂ ಕೂಡ ‘ಇವಿಎಂ’ ಕೈ ಕೊಟ್ಟಿವೆ. ಇದರಿಂದ ಅಲ್ಲೂ ಕೂಡ ಮತದಾರರ ಅಸಮಾಧಾನಕ್ಕೆ ಅಧಿಕಾರಿಗಳು ತುತ್ತಾದರು. ಪಾವೂರು ಗ್ರಾಮದ ಮಲಾರ್ ಬದ್ರಿಯಾ ನಗರದಲ್ಲಿ ಕೂಡ ಒಂದು ಮತದಾರರ ಪಟ್ಟಿಯನ್ನು ವಿಭಾಗಿಸಿ ಪ್ರತ್ಯೇಕ ಮತದಾನ ಮಾಡಲು ವ್ಯವಸ್ಥೆ ಮಾಡಲಾಯಿತು. ಆದರೆ, ಈ ಬಗ್ಗೆ ಮಾಹಿತಿ ಇಲ್ಲದ ಮತದಾರರು ಯಾವ ಮತಗಟ್ಟೆಯ ಸರತಿ ಸಾಲಿನಲ್ಲಿ ನಿಲ್ಲಬೇಕು ಎಂದು ತಿಳಿಯದೆ ಗೊಂದಲಕ್ಕೀಡಾದರು. ಅಲ್ಲದೆ, ‘ಇವಿಎಂ’ ಯಂತ್ರವು ಚಾಲನೆಗೊಳ್ಳದ ಕಾರಣ 15 ನಿಮಿಷ ವಿಳಂಬವಾಯಿತು.