ಬಂಟ್ವಾಳ: ಮದುವೆ ಔತಣಕೂಟದಿಂದ ಮತಗಟ್ಟೆಗೆ ಬಂದು ಮತಚಲಾಯಿಸಿದ ವಧು
Update: 2018-05-12 16:23 IST
ಮಂಗಳೂರು, ಮೇ 12: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಂಡಾರಿಬೆಟ್ಟುವಿನ ಮತಗಟ್ಟೆಯೊಂದರಲ್ಲಿ ಶನಿವಾರ ವಧುವೊಬ್ಬರು ಮತ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಭಂಡಾರಿಬೆಟ್ಟು ಜನಾರ್ದನ್ ಮತ್ತು ನಾಗವೇಣಿ ದಂಪತಿಯ ಪುತ್ರಿ, ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅರ್ಪಿತಾ ಜೆ. ಸಾಲ್ಯಾನ್ ಅವರಿಗೆ 29ರಂದು ದಿಲ್ಲಿಯಲ್ಲಿ ಮದುವೆ ನಡೆಯಲಿದೆ. ಇಂದು ಬಿ.ಸಿ.ರೋಡ್ ಮೊಡಂಕಾಪು ಚರ್ಚ್ ಹಾಲ್‌ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಚಿನ್ನಾಭರಣದೊಂದಿಗೆ ಸಿಂಗಾರಗೊಂಡ ಅರ್ಪಿತಾ ಬೆಳಗ್ಗೆ ಕುಟುಂಬಸ್ಥರೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
‘‘ನಾನು ಮೊದಲ ಬಾರಿ ಮತ ಚಲಾಯಿಸುತ್ತಿದ್ದೇನೆ. ಇದೊಂದು ಹೊಸ ಅನುಭವವಾಗಿದೆ. ಕಲಿಕೆ ಮತ್ತು ಉದ್ಯೋಗದ ಕಾರಣ ಮತದಾನದ ದಿನ ಬೆಂಗಳೂರಿನಿಂದ ಊರಿಗೆ ಬಂದು ಮತ ಚಲಾಯಿಸಲು ಅವಕಾಶ ಸಿಗುತ್ತಿರಲಿಲ್ಲ. ಈ ಬಾರಿ ಹಕ್ಕು ಚಲಾಯಿಸಲು ಅವಕಾಶ ಸಿಕ್ಕಿರುವುದು ತುಂಬಾ ಖುಷಿಯಾಗಿದೆ.’’
-ಅರ್ಪಿತಾ ಜೆ.