×
Ad

ಉಡುಪಿ: ಮತಯಂತ್ರದಲ್ಲಿ ದೋಷ, ಕೈಕೊಟ್ಟ ವೆಬ್‌ಕಾಸ್ಟಿಂಗ್ ವ್ಯವಸ್ಥೆ

Update: 2018-05-12 18:25 IST
ಬಡಗುಬೆಟ್ಟು ಮತಗಟ್ಟೆಯಲ್ಲಿ ನಿಧಾನಗತಿಯ ಮತದಾನಕ್ಕೆ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ, ಮೇ 12: ಉಡುಪಿ ಜಿಲ್ಲೆಯ ವಿವಿಧ ಮತಗಟ್ಟೆಗಳ ಮತ ಯಂತ್ರಗಳಲ್ಲಿ ದೋಷ ಕಂಡುಬಂದಿದ್ದು, ಇದರಿಂದ ಕೆಲವು ಕಡೆ ಮತದಾನ ಪ್ರಕ್ರಿಯೆ ವಿಳಂಬವಾಗಿ ಆರಂಭಗೊಂಡಿತು.

ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಕ್ಕಿಕಟ್ಟೆಯ ಬೂತ್ ನಂ 186ರ ಮತಯಂತ್ರದಲ್ಲಿ ದೋಷ ಕಂಡುಬಂದಿತು. ಒಂದು ತಾಸು ಕಳೆದರೂ ಮತದಾನ ಆರಂಭವಾಗದ ಹಿನ್ನೆಲೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ನೂರಕ್ಕೂ ಅಧಿಕ ಮತದಾರರು ಆಕ್ರೋಶ ವ್ಯಕ್ತಪಡಿಸಿ ವಾಪಾಸ್ಸು ಹೋದರೆಂದು ತಿಳಿದುಬಂದಿದೆ.

ಅದೇ ರೀತಿ ಕಾಪು ವಿಧಾನ ಕ್ಷೇತ್ರದ ಕಾಪು, ಪಣಿಯೂರು, ಬೈಂದೂರು ಕ್ಷೇತ್ರದ ಗಂಗೊಳ್ಳಿ ಸರಸ್ವತಿ ಶಾಲೆಯ ಮತಗಟ್ಟೆ, ಕಾರ್ಕಳದ ಬಂಗ್ಲೆಗುಡ್ಡೆ ಮತ ಗಟ್ಟೆಯಲ್ಲೂ ಮತಯಂತ್ರದಲ್ಲಿ ದೋಷ ಕಂಡುಬಂತೆನ್ನಲಾಗಿದೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಜಾನುವಾರುಕಟ್ಟೆಯ ಸರಕಾರಿ ಶಾಲೆಯ ಮತಗಟ್ಟೆಯ ಮತಯಂತ್ರ ಆರಂಭದಲ್ಲೇ ಕೈಕೊಟ್ಟಿದ್ದು, ಇದರಿಂದ ಮತ ದಾರರು ಒಂದೂವರೆ ಗಂಟೆಗಳ ಕಾಲ ಮತಗಟ್ಟೆಯಲ್ಲೇ ಕಾಯಬೇಕಾಯಿತು. ಅಧಿಕಾರಿಗಳು ಮೊದಲು ಆಗಮಿಸಿದವರಿಗೆ ಟೋಕನ್ ವ್ಯವಸ್ಥೆ ಕಲ್ಪಿಸಿ ನಂತರ ಸುಗಮವಾಗಿ ಮತದಾನ ಪ್ರಕ್ರಿಯೆ ಮುಂದುವರೆಸಿದರು. ಸ್ಥಳಕ್ಕೆ ಕುಂದಾಪುರ ಸಹಾಯಕ ಆಯುಕ್ತ ಭೂಬಾಲನ್ ಆಗಮಿಸಿದ್ದರು.

ಕಾಪು ಕ್ಷೇತ್ರದ ಬಡಗುಬೆಟ್ಟು ಶಾಲೆಯ ಮತಗಟ್ಟೆಯಲ್ಲಿ ನಿಧಾನಗತಿಯ ಮತದಾನ ನಡೆದ ಪರಿಣಾಮ 200ಕ್ಕೂ ಹೆಚ್ಚು ಮತದಾರರು ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಕಾಯಬೇಕಾಯಿತು. ಈ ವೇಳೆ ಅಧಿಕಾರಿಗಳ ವಿರುದ್ಧ ಮತದಾರರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವೆಬ್‌ಕಾಸ್ಟಿಂಗ್ ಹಾನಿ: ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಸುರಿದ ಗುಡುಗು ಸಹಿತ ಭಾರೀ ಮಳೆಯಿಂದ ಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆ ಗಳಲ್ಲಿ ಅಳವಡಿಸಲಾದ ವೆಬ್‌ಕಾಸ್ಟಿಂಗ್ ವ್ಯವಸ್ಥೆಗೆ ಹಾನಿಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 132 ಮತಗಟ್ಟೆಗಳಿಗೆ ಈ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಈ ಮೂಲಕ ಈ ಮತಗಟ್ಟೆಗಳಲ್ಲಿ ನಡೆಯುವ ಮತ ದಾನದ ಸಂಪೂರ್ಣ ಚಟುವಟಿಕೆಗಳನ್ನು ಜಿಲ್ಲಾಧಿಕಾರಿ ಕಚೇರಿ, ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗದ ಕಚೇರಿುಲ್ಲಿಯೇ ಕೂತು ವೀಕ್ಷಿಸಬಹುದಾಗಿದೆ.

ಸಿಡಿಲಿನ ಪರಿಣಾಮವಾಗಿ ಇಂದು ಬೆಳಗ್ಗೆಯಿಂದ ಸುಮಾರು 60 ಮತಗಟ್ಟೆ ಗಳ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಹಾನಿಗೊಂಡು ಸರಿಯಾಗಿ ಕಾರ್ಯನಿರ್ವಹಿ ಸುತ್ತಿರಲಿಲ್ಲ. ಕೇವಲ 70 ಮತಗಟ್ಟೆಗಳ ಚಟುವಟಿಕೆಗಳನ್ನು ಮಾತ್ರ ವೀಕ್ಷಿಸಲಾಗುತ್ತಿತ್ತು. ಬಳಿಕ ಈ ವ್ಯವಸ್ಥೆ ದುರಸ್ತಿ ಕಾರ್ಯ ನಡೆಸಲಾಯಿತು. ಈ ಬಗ್ಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರತಿಕ್ರಿಯಿಸಿ, ಸಿಡಿಲಿನಿಂದಾಗಿ ವೆಬ್ ಕಾಸ್ಟಿಂಗ್‌ಗೆ ಹಾನಿಯಾಗಿದ್ದು, ಅದನ್ನು ದುರಸ್ತಿ ಮಾಡುವ ಕಾರ್ಯ ಮಾಡಲಾಗಿದೆ ಎಂದರು.

ರಾತ್ರಿ ಸುರಿದ ಗಾಳಿಮಳೆಯಿಂದಾಗಿ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತಯ ಉಂಟಾಗಿದ್ದು, ಇದರ ಪರಿಣಾಮ ಕೆಲವು ಮತಗಟ್ಟೆಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಮತಗಟ್ಟೆಯ ಸಿಬ್ಬಂದಿಗಳು ಪರದಾಟ ನಡೆಸಿದರು. ರಾತ್ರಿಯಿಡೀ ಆಗಾಗ ವಿದ್ಯುತ್ ಕೈಕೊಟ್ಟು ಅವರಿಗೆ ತೊಂದರೆಯಾಯಿತು. ಕೆಲವು ಕಡೆಗಳಲ್ಲಿ ಹಿರಿಯ ನಾಗರಿಕರು ಮತದಾನ ಮಾಡಲು ಪರದಾಡುವ ಸ್ಥಿತಿ ಕಂಡುಬಂತು. 

ಆಸ್ಪತ್ರೆಯಿಂದ ಮತಗಟ್ಟೆಗೆ
ಶಸ್ತ್ರಚಿಕಿತ್ಸೆಗೆ ಒಳಗಾಗಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವ ಮಹಿಳೆಯೊಬ್ಬರು ವೈದ್ಯರ ಸಹಾಯದಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೆಂಕನಿಡಿಯೂರು ನಿವಾಸಿ ಸರೋಜ ಎಸ್.ರಾವ್(80) ಆಸ್ಪತ್ರೆಯ ವೈದ್ಯರಾದ ಡಾ.ಹರಿಶ್ಚಂದ್ರ ಹಾಗೂ ಡಾ.ಸುರೇಶ್ ಶೆಣೆೈ ಅವರ ಸಹಾಯದಿಂದ ತೆಂಕನಿಡಿಯೂರು ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ಮತ್ತೆ ಆಸ್ಪತ್ರೆಗೆ ಬಂದು ದಾಖಲಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News