×
Ad

ಪುತ್ತೂರು :ಅದಲು ಬದಲಾದ ಮತದಾನ ಗೊಂದಲ

Update: 2018-05-12 19:28 IST

ಪುತ್ತೂರು,ಮೇ.12 : ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಸಂಜಯ ನಗರ ಶಾಲೆಯಲ್ಲಿನ 146ನೇ ಮತಗಟ್ಟೆಯಲ್ಲಿ ಮತ  ಚಲಾಯಿಸಬೇಕಾಗಿದ್ದ ಮಹಿಳೆಯೊಬ್ಬರು, ಅದೇ ಶಾಲೆಯ ಇನ್ನೊಂದು ಭಾಗದಲ್ಲಿದ್ದ 147ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿ ತೆರಳಿದ್ದು ಗೊಂದಲ ಸೃಷ್ಠಿಗೆ ಕಾರಣವಾಯಿತು. 

ಸಂಜಯನಗರದ ಪದ್ಮನಾಭ ಎಂಬವರ ಪತ್ನಿ  ಕೆ.ಜಯಂತಿ ಎಂಬವರು ಸಂಜಯನಗರ ಶಾಲೆಯಲ್ಲಿನ 147ನೇ ಮತಗಟ್ಟೆಗೆ ಮತ ಚಲಾಯಿಸಲು ಹೋದ ವೇಳೆ ಅಧಿಕಾರಿಗಳು ನಿಮ್ಮ ಮತ ಚಲಾವಣೆ ಆಗಿದೆ ಎಂದು ತಿಳಿಸಿದ್ದರು. ಇದರಿಂದಾಗಿ ಆಕ್ರೋಶಿತರಾದ ಜಯಂತಿ ಅವರು ನಾನು ಮತ ಚಲಾಯಿಸಲು ಈಗ ತಾನೇ ಬಂದಿದ್ದೇನೆ. ಹೀಗಿರುವಾಗ ನನ್ನ ಮತವನ್ನು ಇನ್ಯಾರೋ ಚಲಾಯಿಸಿದ್ದಾದರೂ ಹೇಗೆ ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಅಧಿಕಾರಿಗಳ ಬೇಜವಾಬ್ದಾರಿಯ ಕುರಿತು ಚುನಾವಣಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿ ಮತಗಟ್ಟೆಯಿಂದ ಹೊರ ಬಂದರು. 

ಈ ಗೊಂದಲದ ಹಿನ್ನಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅದೇ ಶಾಲೆಯ ಮತ್ತೊಂದು ಕೊಠಡಿಯಲ್ಲಿರುವ 146ನೇ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕಾಗಿದ್ದ ಪುಷ್ಪಲತಾ ಎಂಬವರು 147ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿರುವುದು ಗಮನಕ್ಕೆ ಬಂತು. ಬಳಿಕ ಅಧಿಕಾರಿಗಳು ಪುಷ್ಪಲತಾ ಅವರ ಮತವನ್ನು 146ನೇ ಮತಗಟ್ಟೆಗೆ ವರ್ಗಾಯಿಸಿ, 147 ನೇ ಮತಗಟ್ಟೆಯಲ್ಲಿ ಜಯಂತಿ ಅವರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಗೊಂದಲಕ್ಕೆ ತೆರೆ ಎಳೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News