23 ವರ್ಷದ ಯುವತಿಯನ್ನು ವಿವಾಹವಾದ 13ರ ಬಾಲಕ!

Update: 2018-05-12 13:58 GMT

ಹೈದರಾಬಾದ್, ಮೇ 12: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಉಪ್ಪರಹಲ್ ಗ್ರಾಮದಲ್ಲಿ ಕಳೆದ ತಿಂಗಳು 13 ವರ್ಷದ ಬಾಲಕನ ವಿವಾಹವೊಂದು 23 ವರ್ಷದ ಯುವತಿಯೊಂದಿಗೆ ನಡೆದ ಬಗ್ಗೆ ವರದಿಯಾಗಿದೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಬಾಲಕನ ತಾಯಿ ತನ್ನ ನಂತರ ಕುಟುಂಬವನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದು ಈ ವಿವಾಹ ನೆರವೇರಿಸಿದ್ದಳೆನ್ನಲಾಗಿದ್ದು, ತಾಯಿಯ ಆಸೆಯಂತೆಯೇ ಮಗ ತನಗಿಂತ 10 ವರ್ಷ ದೊಡ್ಡವಳಾದ ಯುವತಿಯನ್ನು ವಿವಾಹವಾಗಿದ್ದಾನೆ.

ವಿವಾಹ ಎಪ್ರಿಲ್ 27ರಂದು ನಡೆದಿದ್ದರೂ ಅದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರವಷ್ಟೇ ಅಧಿಕಾರಿಗಳಿಗೆ ತಿಳಿದು ಬಂದಿತ್ತು. ಯುವತಿ ಬಳ್ಳಾರಿ ಜಿಲ್ಲೆಯ ಚನಿಕನೂರು ಗ್ರಾಮದವಳಾಗಿದ್ದು, ಈ ಕಾನೂನಬಾಹಿರ ವಿವಾಹದ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆಯೇ ಎರಡೂ ಕುಟುಂಬಗಳು ನಾಪತ್ತೆಯಾಗಿವೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶಾರದಾ, ಸ್ಥಳೀಯ ತಹಶೀಲ್ದಾರ್ ಶ್ರೀನಿವಾಸ್ ಅವರನ್ನೊಳಗೊಂಡ ಹಿರಿಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದರೂ ಹುಡುಗನ ಮನೆಗೆ ಬೀಗ ಹಾಕಿದ್ದು ಕಂಡು ಬಂತು.

ವಿವಾಹವಾಗಿರುವ ಬಾಲಕನ ಕುಟುಂಬ ಕಡು ಬಡತನದಲ್ಲಿದ್ದು ತಂದೆ ತಾಯಿ ಇಬ್ಬರೂ  ಕೃಷಿ ಕೂಲಿ ಕಾರ್ಮಿಕರಾಗಿದ್ದಾರೆ.  ಬಾಲಕನ ತಂದೆ ಕುಡುಕನಾಗಿದ್ದರಿಂದ ಆತನ ತಾಯಿ ತನ್ನ ಸಾವಿನ ನಂತರ ಕುಟುಂಬವನ್ನು ಯಾರು ಸಲಹುತ್ತಾರೆಂಬ ಚಿಂತೆಯಲ್ಲಿದ್ದ ಕಾರಣ ಈ ಮದುವೆ ನಡೆಸಿದ್ದಾಳೆ ಎನ್ನಲಾಗಿದೆ. ದಂಪತಿಗೆ  ಬಾಲಕನ ಹೊರತಾಗಿ ಇತರ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದಾನೆ.

ಈ ವಿವಾಹ ಕಾನುನುಸಮ್ಮತವಲ್ಲ. ಬಾಲಕ ಹಾಗೂ ಯುವತಿಯನ್ನು ಅಧಿಕಾರಿಗಳಿಗೆ ಎರಡು ದಿನಗಳೊಳಗಾಗಿ ಒಪ್ಪಿಸಿದರೆ ಸರಿ, ಇಲ್ಲದೇ ಹೋದಲ್ಲಿ ಪ್ರಕರಣ ದಾಖಲಿಸಲಾಗುವುದು  ಎಂದು ತಹಸೀಲ್ದಾರ್ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News